ಮುಂಬೈ: ಮಹಾರಾಷ್ಟ್ರ ರಾಜ್ಯ ರಾಜಕೀಯ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಾ ಸಾಗುತ್ತಿದೆ. ಇತ್ತೀಚೆಗಿನ ಬೆಳವಣಿಗೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಉದ್ಧವ್ ಠಾಕ್ರೆಗೆ ಕರೆ ಮಾಡಿ, ಕಷ್ಟದ ಪರಿಸ್ಥಿತಿಯಲ್ಲಿ ನಾವು ನಿಮ್ಮೊಂದಿಗಿದ್ದೇವೆ, ಚಿಂತಿಸಬೇಡಿ ಎಂದು ಧೈರ್ಯ ತುಂಬಿದ್ದಾರೆ ಎಂದು ತಿಳಿದುಬಂದಿದೆ. ಇದರ ಜೊತೆಗೆ, ಕಾಂಗ್ರೆಸ್ ಮತ್ತು ಎನ್‌ಸಿಪಿಯಿಂದ ಶಿವಸೇನೆಗೆ ಯಾವ ರೀತಿಯ ಹಾನಿಯಾಗುತ್ತಿದೆ ಎಂಬ ಚರ್ಚೆಯೂ ಸಾಗಿದೆ.
ದೆಹಲಿಗೆ ಶರದ್ ಪವಾರ್: ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಇಂದು ಮುಂಬೈನಿಂದ ದೆಹಲಿಗೆ ತೆರಳಲಿದ್ದಾರೆ. ವಿರೋಧ ಪಕ್ಷದ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್ ಸಿನ್ಹಾ ಜೂನ್ 27 ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಇದಕ್ಕಾಗಿ ಪವಾರ್ ದೆಹಲಿಗೆ ತೆರಳುತ್ತಿದ್ದಾರೆ ಎನ್ನಲಾಗುತ್ತಿದೆ. ಪವಾರ್ ದೆಹಲಿ ಭೇಟಿಯು ರಾಷ್ಟ್ರಪತಿ ಚುನಾವಣೆಯ ಪೂರ್ವಭಾವಿಯಾಗಿರಬಹುದೆಂದು ಹೇಳಲಾಗುತ್ತಿದ್ದರೂ ಅವರು ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗಳ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕರೊಂದಿಗೆ ಮತ್ತು ಮಹಾರಾಷ್ಟ್ರದ ಪರಿಸ್ಥಿತಿಯನ್ನು ಇತರ ವಿರೋಧ ಪಕ್ಷಗಳೊಂದಿಗೆ ಚರ್ಚಿಸುವ ಸಾಧ್ಯತೆ ದಟ್ಟವಾಗಿದೆ.
ಮುಖಂಡರಿಗೆ ಮಸಿ:ಈ ಬೆಳವಣಿಗೆಗಳ ನಡುವೆ ಶಿಂದೆ ಬೆಂಬಲಿಗರು ಉದ್ಧವ್ ಠಾಕ್ರೆ ಅವರನ್ನು ಬೆಂಬಲಿಸುವ ಪೋಸ್ಟರ್‌ಗಳಿಗೆ ಮಸಿ ಬಳಿಯುತ್ತಿದ್ದರೆ, ಇನ್ನೊಂದೆಡೆ, ಶಿಂದೆ ಪೋಸ್ಟರ್‌ಗಳಿಗೆ ಠಾಕ್ರೆ ಅಭಿಮಾನಿಗಳು ಮಸಿ ಬಳಿದುಕೊಂಡು ಬರುವ ಕೆಲಸ ಮಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಮುಂಬೈನ ಶಿವಸೇನೆ ಮುಖವಾಣಿ ಸಾಮ್ನಾ ಕಚೇರಿಯ ಮುಂದೆ ಶಿವಸೇನೆಯ ಬಂಡಾಯ ಶಾಸಕರ ವಿರುದ್ಧ ಶಿವಸೇನೆ ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸಿದ್ದಾರೆ.
ಭಿನ್ನಮತೀಯರಿಗೆ ನೋಟಿಸ್:ರೆಬೆಲ್ ಶಾಸಕರು ಈವರೆಗೂ ಶಿವಸೇನೆ ತ್ಯಜಿಸಿರುವ ಮಾತುಗಳನ್ನು ಆಡಿಲ್ಲವಾದರೂ ಕಾನೂನು ಕ್ರಮಕ್ಕೆ ಒಳಗಾಗುವ ಸಾಧ್ಯತೆ ಇದೆ. ನಮ್ಮ ಸಿಟ್ಟು ಎನ್‌ಸಿಪಿ ಹಾಗೂ ಕಾಂಗ್ರೆಸ್ ವಿರುದ್ಧ ಅಷ್ಟೇ ಎಂದು ಶಾಸಕ ದೀಪಕ್ ಕೇಸ್ಕರ್ ಹೇಳಿದ್ದು, ನಮ್ಮದೇ ನಿಜವಾದ ಶಿವಸೇನೆ, ವಿಧಾನಸಭೆಯಲ್ಲಿ ನಮ್ಮ ಬಣ ಬಹುಮತ ಸಾಬೀತು ಮಾಡಲಿದೆ ಎಂದಿದ್ದಾರೆ. ಆದರೆ, ಈಗ ಶಿಂದೆ ಜೊತೆಗಿರುವ 52 ಶಾಸಕರ ಪೈಕಿ 16 ಮಂದಿಗೆ ರಾಜ್ಯ ವಿಧಾನಸಭೆಯ ಉಪಸಭಾಧ್ಯಕ್ಷ ನರಹರಿ ಝಿರ್ವಾಡೋ ಅವರು ನೋಟಿಸ್ ನೀಡಿದ್ದಾರೆ. ಅವರನ್ನು ಅನರ್ಹಗೊಳಿಸಬೇಕು ಎಂದು ಸೇನೆಯ ಮುಖ್ಯ ಸಚೇತಕ ಸುನೀಲ್ ಪ್ರಭು ನೀಡಿರುವ ಮನವಿ ಪರಿಗಣಿಸಿ ಈ ನೋಟಿಸ್ ನೀಡಲಾಗಿದೆ.
ಇದನ್ನೂ ಓದಿ:₹25 ಕೋಟಿ ಮೌಲ್ಯದ ಮಾದಕ ದ್ರವ್ಯ ನಾಶಪಡಿಸಲಿರುವ ಬೆಂಗಳೂರು ಪೊಲೀಸರು