ಮುಂಬೈ: ಬಂಡಾಯ ಶಾಸಕರ ವಿರುದ್ಧ ಉಪಸಭಾಪತಿ ನರಹರಿ ಜಿರ್ವಾಲ್ ನೀಡಿರುವ ಅನರ್ಹತೆ ನೋಟಿಸ್ ಅನ್ನು ಶಿವಸೇನಾ ಶಾಸಕ ಮತ್ತು ಸಚಿವ ಏಕನಾಥ್ ಶಿಂಧೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. 38 ಶಾಸಕರು ತಮ್ಮ ಬೆಂಬಲ ಹಿಂಪಡೆದಿರುವುದರಿಂದ ಸರ್ಕಾರ ಅಲ್ಪಮತದಲ್ಲಿದೆ ಎಂದು ಶಿಂಧೆ ಅರ್ಜಿಯಲ್ಲಿ ಹೇಳಿದ್ದಾರೆ.
ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೆಬಿ ಪರ್ದಿವಾಲಾ ಅವರ ರಜಾಕಾಲದ ಪೀಠದ ಮುಂದೆ ಶಿಂದೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಯುತ್ತಿದೆ. ಈ ಸಂಬಂಧ ಎರಡು ಅರ್ಜಿಗಳು ಸಲ್ಲಿಕೆಯಾಗಿವೆ. ವಿಧಾನಸಭೆಯ ಉಪ ಸ್ಪೀಕರ್ ನೀಡಿರುವ ಅನರ್ಹತೆ ನೋಟಿಸ್ ಪ್ರಶ್ನಿಸಿರುವ ಬಂಡಾಯ ನಾಯಕ ಶಿಂದೆ ಒಂದು ಅರ್ಜಿ ಸಲ್ಲಿಕೆ ಮಾಡಿದರೆ, ಬಂಡಾಯ ಶಾಸಕರು ಮತ್ತೊಂದು ಅರ್ಜಿಯನ್ನು ಸಲ್ಲಿಸಿದ್ದಾರೆ.
ಅಜಯ್ ಚೌಧರಿ ನೇಮಕದ ವಿರುದ್ಧ ಅರ್ಜಿ:ಅಜಯ್ ಚೌಧರಿ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ನೇಮಕ ಮಾಡುವುದನ್ನೂ ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಅವರ ವಿರುದ್ಧ ಯಾವುದೇ ಅನರ್ಹತೆ ಕ್ರಮ ಕೈಗೊಳ್ಳದಂತೆ ಉಪ ಸಭಾಧ್ಯಕ್ಷರಿಗೆ ನ್ಯಾಯಾಲಯ ಸೂಚಿಸುವಂತೆ ಅರ್ಜಿಯಲ್ಲಿ ಕೊರಲಾಗಿದೆ. ಕೇವಲ 16 ಶಾಸಕರಿಗೆ ಅನರ್ಹತೆ ನೋಟಿಸ್ ಜಾರಿಗೊಳಿಸಿರುವ ಉಪಾಧ್ಯಕ್ಷರ ನಡೆ ಕಾನೂನುಬಾಹಿರ ಎಂದು ಶಿಂದೆ ಗುಂಪು ಅರ್ಜಿಯಲ್ಲಿ ಪ್ರತಿಪಾದಿಸಿದೆ.
ಬಂಡಾಯ ಶಾಸಕರ ಕುಟುಂಬಗಳಿಗೆ ಭದ್ರತೆ ನೀಡಿ:ಬಂಡಾಯ ಶಾಸಕರ ಕುಟುಂಬಗಳಿಗೆ ಭದ್ರತೆ ನೀಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆಯೂ ಅರ್ಜಿಯಲ್ಲಿ ಅರಿಕೆ ಮಾಡಿಕೊಳ್ಳಲಾಗಿದೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಮಹಾವಿಕಾಸ್ ಅಘಾಡಿ ಸರ್ಕಾರದ ವಿರುದ್ಧ ಬಂಡಾಯ ಎದ್ದಿರುವುದರಿಂದಾಗಿ ಅಸ್ಸೋಂ ರಾಜಧಾನಿ ಗುವಾಹಟಿಯಲ್ಲಿ ಶಿಂದೆ ಬಣದ ಶಾಸಕರು ಹೋಟೆಲ್‌ಗಳಲ್ಲಿ ಬೀಡುಬಿಟ್ಟಿದ್ದಾರೆ.