ಮುಂಬೈ (ಮಹಾರಾಷ್ಟ್ರ):ಎರಡು ಬೇರೆ-ಬೇರೆ ತತ್ವ-ಸಿದ್ದಾಂತಗಳನ್ನು ಬದಿಗೊತ್ತಿ ಅಧಿಕಾರಕ್ಕೆ ಬಂದಿದ್ದ ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಮಹಾವಿಕಾಸ್ ಆಘಾಡಿ ಸರ್ಕಾರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾಜೀನಾಮೆಯೊಂದಿಗೆ ಪತನವಾಗಿದೆ. ಈ ಮೂಲಕ ಕಳೆದ ಹತ್ತು ದಿನಗಳಿಂದ ನಡೆಯುತ್ತಿದ್ದ ರಾಜಕೀಯದ ಮಹಾ ಹೈಡ್ರಾಮಕ್ಕೂ ಮೊದಲ ಹಂತದ ತೆರೆ ಬಿದ್ದಿದೆ.
2019ರಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಶಿವಸೇನೆ ಮತ್ತು ಬಿಜೆಪಿ ಮೈತ್ರಿಕೂಟ ಬಹುಮತ ಪಡೆದಿತ್ತು. ಎರಡೂ ಪಕ್ಷಗಳು ಹಿಂದುತ್ವದ ಸಿದ್ಧಾಂತದ ಮೇಲೆ ತಮ್ಮ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡಿದ್ದವು. 288ರ ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 105 ಹಾಗೂ ಶಿವಸೇನೆ 56 ಸ್ಥಾನಗಳನ್ನು ಗೆದ್ದಿತ್ತು. ಇತ್ತ, ಎನ್ಸಿಪಿ 54 ಹಾಗೂ ಕಾಂಗ್ರೆಸ್ 44 ಸ್ಥಾನಗಳನ್ನು ಪಡೆದಿತ್ತು. ಈ ಎರಡೂ ಪಕ್ಷಗಳು ಸಹ ಮೈತ್ರಿ ಮೇಲೆಯೇ ಚುನಾವಣೆ ಎದುರಿಸಿದ್ದವು. ಆದರೆ, ಬಿಜೆಪಿ-ಶಿವಸೇನೆ ನಡುವೆ ಅಧಿಕಾರಿದ ಹಂಚಿಕೆಯ ಹಗ್ಗಜಗ್ಗಾಟದಲ್ಲಿ ಮೈತ್ರಿ ಮುರಿದು ಬಿದ್ದಿತ್ತು. ಅಲ್ಲಿಂದ ನಡೆದ ಬೆಳವಣೆಗಳ ಹಿನ್ನೋಟ ಇಲ್ಲಿದೆ...
1. 50-50 ಅಧಿಕಾರ ಹಂಚಿಕೆ ಗುದ್ದಾಟ: ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ನಡುವೆ ಕ್ಷೇತ್ರಗಳ ಹಂಚಿಕೆಯಲ್ಲಿ ಹೊಂದಾಣಿಕೆಯಾಗಿತ್ತು. ಆದರೆ, ಸರ್ಕಾರ ರಚನೆ ಸಂದರ್ಭದಲ್ಲಿ ಎರಡು ಪಕ್ಷಗಳ ನಡುವೆ ಮನಸ್ತಾಪ ಉಂಟಾಗಿತ್ತು. ಶಿವಸೇನೆ ಐದು ವರ್ಷಗಳ ಅಧಿಕಾರಾವಧಿಯಲ್ಲಿ ತನಗೆ ಎರಡೂವರೆ ವರ್ಷ ಮುಖ್ಯಮಂತ್ರಿ ಪಟ್ಟ ನೀಡಬೇಕೆಂದು ಪಟ್ಟು ಹಿಡಿದಿತ್ತು. ಆದರೆ, ಇದಕ್ಕೆ ಬಿಜೆಪಿ ಒಪ್ಪಿರಲಿಲ್ಲ.
2. ರಾಷ್ಟ್ರಪತಿ ಆಳ್ವಿಕೆ: ಶಿವಸೇನೆ ಬಿಜೆಪಿಯೊಂದಿಗೆ ಮೈತ್ರಿಗೆ ಮುಂದಾಗದ ಕಾರಣ ರಾಜ್ಯಪಾಲರು ಅತಿದೊಡ್ಡ ಪಕ್ಷವಾದ ಬಿಜೆಪಿ ಅಧಿಕಾರ ರಚನೆಗೆ ಆಹ್ವಾನ ನೀಡಿದ್ದರು. ಆದರೆ, ಅಗತ್ಯವಾದ ಸಂಖ್ಯಾಬಲ ಇಲ್ಲದ ಕಾರಣ ಬಿಜೆಪಿ ಸರ್ಕಾರ ರಚನೆಗೆ ಮುಂದೆ ಬಂದಿರಲಿಲ್ಲ. ಹೀಗಾಗಿ ರಾಜ್ಯಪಾಲರು ಎರಡನೇ ಅತಿದೊಡ್ಡ ಪಕ್ಷವಾಗಿದ್ದ ಎನ್ಸಿಪಿಗೆ ಸರ್ಕಾರ ರಚನೆಗೆ ಆಹ್ವಾನಿಸಿದ್ದರು. ಆದರೆ, ತನ್ನ ಬಹುಮತ ಸಾಬೀತಿಗೆ ಎನ್ಸಿಪಿ ವಿಫಲವಾಗಿತ್ತು. ಹೀಗಾಗಿ ರಾಜ್ಯಪಾಲರು ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸ್ಸು ಮಾಡಿದ್ದರು. ಇದಕ್ಕೆ ಕೇಂದ್ರ ಸರ್ಕಾರ ಒಪ್ಪಿ ರಾಷ್ಟ್ರಪತಿ ಆಡಳಿತ ಹೇರಿತ್ತು.
3. ಫಡ್ನವೀಸ್ ಸರ್ಕಾರ ರಚನೆ ಯತ್ನ: ಈ ನಡುವೆ 2019ರ ನವೆಂಬರ್ 23ರಂದು ರಾಷ್ಟ್ರಪತಿ ಆಳ್ವಿಕೆ ತೆರವು ಮಾಡಲಾಗಿತ್ತು. ಆಗ ಬಿಜೆಪಿಯ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆಗ ಎನ್ಸಿಪಿಯ ಒಂದು ಬಣ ಫಡ್ನವೀಸ್ಗೆ ಬೆಂಬಲ ಕೊಡಲು ಮುಂದಾಗಿತ್ತು. ಆದರೆ, ಮತ್ತೊಂದು ಬಣ ಭಾರೀ ವಿರೋಧ ವ್ಯಕ್ತಪಡಿಸಿತ್ತು. ಹೀಗಾಗಿ ಫಡ್ನವೀಸ್ ವಿರುದ್ಧ ಶಿವಸೇನೆ, ಕಾಂಗ್ರೆಸ್ ಹಾಗೂ ಎನ್ಸಿಪಿ ಸುಪ್ರೀಂಕೋರ್ಟ್ಗೆ ಹೋಗಿದ್ದವು. ಆಗ ನೂತನ ಸರ್ಕಾರಕ್ಕೆ ಬಹುಮತ ಸಾಬೀತುಪಡಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿತ್ತು. ಆದರೆ, ಬಿಜೆಪಿಗೆ ಬಂಬಲ ನೀಡಿದ್ದ ಡಿಸಿಎಂ ಆಗಿದ್ದ ಎನ್ಸಿಪಿಯ ಅಜಿತ್ ಪವಾರ್ ದಿಢೀರ್ ಆಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಈ ಮೂಲಕ ಫಡ್ನವೀಸ್ ಸರ್ಕಾರ ರಚನೆ ಯತ್ನ ವಿಫಲವಾಗಿ ಹೋಯ್ತು.
4. ಮಹಾ ವಿಕಾಸ್ ಆಘಾಡಿ ಸರ್ಕಾರ: ಫಡ್ನವೀಸ್ ಸರ್ಕಾರ ರಚನೆ ಯತ್ನ ವಿಫಲವಾದ ಕೂಡಲೇ ಎನ್ಸಿಪಿ ಮತ್ತು ಕಾಂಗ್ರೆಸ್ ಜೊತೆಗೆ ಶಿವಸೇನೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆಗೆ ಮುಂದಾಗಿತ್ತು. ಆಗಲೇ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ನೇತೃತ್ವದ 'ಮಹಾ ವಿಕಾಸ್ ಆಘಾಡಿ ಸರ್ಕಾರ' ಅಧಿಕಾರಕ್ಕೆ ಬಂತು. 19ನೇ ಮುಖ್ಯಮಂತ್ರಿಯಾಗಿ 2019ರ ನವೆಂಬರ್ 28ರಂದು ಉದ್ಧವ್ ಠಾಕ್ರೆ ಪ್ರಮಾಣವಚನ ಸ್ವೀಕರಿಸಿದರು. ಅಲ್ಲಿಂದ ಇಲ್ಲಿಯವರೆಗೆ 2.7 ವರ್ಷಗಳ ಅಧಿಕಾರದ ನಡೆಸಿದ ಉದ್ಧವ್ ತಮ್ಮದೇ ಶಿವಸೈನಿಕರ ಬಂಡಾಯದ ಬಿಸಿಗೆ ಪದತ್ಯಾಗ ಮಾಡಿ ಅಧಿಕಾರದಿಂದ ನಿರ್ಗಮಿಸಿದರು.
5. 10 ದಿನಗಳ ಹಿಂದೆ ಬಂಡಾಯ: ಮಹಾರಾಷ್ಟ್ರದಲ್ಲಿ ಕಟ್ಟಾ ವಿರೋಧಿಗಳಾದ ಕಾಂಗ್ರೆಸ್ ಹಾಗೂ ಎನ್ಸಿಪಿ ಜೊತೆಗೆ ಶಿವಸೇನೆ ಅಧಿಕಾರ ಹಂಚಿಕೊಂಡಿದ್ದರೂ, ದೊಡ್ಡ ಮಟ್ಟದ ಗೊಂದಲಗಳಿಲ್ಲದೇ 2.7 ತಿಂಗಳು ಸರ್ಕಾರ ಸುಸೂತ್ರವಾಗಿಯೇ ನಡೆದಿತ್ತು. ಮೊದಲ ಬಾರಿಗೆ ಅಧಿಕಾರದ ಗದ್ದುಗೆ ಏರಿದ್ದ ಠಾಕ್ರೆ ಎನ್ಸಿಪಿ ವರಿಷ್ಠ ಶರದ್ ಪವಾರ್ ರಾಜಕೀಯ ಅನುಭವ, ಸಲಹೆಗಳೊಂದಿಗೆ ಸರ್ಕಾರವನ್ನು ಮುನ್ನಡೆಸುತ್ತಿದ್ದರು. ಆದರೆ, ಸರಿಯಾಗಿ ಹತ್ತು ದಿನಗಳ ಹಿಂದೆ ಜೂನ್.20ರಂದು ಶಿವಸೇನೆಯ ಶಾಸಕರೇ ಉದ್ಧವ್ ವಿರುದ್ಧ ಬಂಡಾಯ ಸಾರಿದ್ದರು.
6. ಅಡ್ಡ ಮತದಾನದೊಂದಿಗೆ ಸರ್ಕಾರಕ್ಕೆ ಶಾಕ್: ರಾಜ್ಯಸಭಾ ಮತ್ತು ವಿಧಾನ ಪರಿಷತ್ ಚುನಾವಣೆಯಲ್ಲಿ ಮೈತ್ರಿ ಸರ್ಕಾರದ ವಿರುದ್ಧ ಶಾಸಕರು ಅಡ್ಡಮತದಾನ ಮಾಡಿ ಶಾಕ್ ಕೊಟ್ಟರು. ಅಲ್ಲಿಂದ ಏಕಾಏಕಿ ಪ್ರಬಲ ನಾಯಕ ಏಕನಾಥ ಶಿಂದೆ ನೇತೃತ್ವದಲ್ಲಿ ಸುಮಾರು 15 ಶಾಸಕರು ಬಿಜೆಪಿ ಆಡಳಿತದ ಗುಜರಾತ್ ಹಾಗೂ ಅಸ್ಸೋಂಗೆ ತೆರಳಿ ಮಹಾ ಸರ್ಕಾರಕ್ಕೆ ಬಿಸಿ ಮಟ್ಟಿಸಿದರು. ಅಲ್ಲಿಂದ ಬಂಡಾಯದ ಶಕ್ತಿ ಹೆಚ್ಚುತ್ತಲೇ ಹೋಗಿ ಸದ್ಯ ಬಂಡಾಯದ ಗುಂಪಿನಲ್ಲಿ ಶಿವಸೇನೆ, ಪಕ್ಷೇತರರು ಹಾಗೂ ಸಣ್ಣ ಪಕ್ಷಗಳ ಶಾಸಕರು ಸೇರಿ ಒಟ್ಟಾರೆ 50 ಜನರು ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದಕ್ಕೆ ಮಣಿದ ಉದ್ಧವ್ ಅನಿರೀಕ್ಷಿತವಾಗಿ ಸಿಎಂ ಗಾದಿಗೆ ಏರಿ ಈಗ ವಿಧಿಯಿಲ್ಲದೇ ಶಸ್ತ್ರತ್ಯಾಗ ಮಾಡಿ ಹೊರನಡೆದಿದ್ದಾರೆ.
ಇದನ್ನೂ ಓದಿ:ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ