ಮುಂಬೈ:ಕೋವಿಡ್ -19 ರೋಗಿಗಳು ಆಮ್ಲಜನಕ ಕೊರತೆಯಿಂದಾಗಿ ತತ್ತರಿಸಿದ್ದಾರೆ. ಹೀಗಾಗಿ ಜನರಿಗೆ ಉಚಿತವಾಗಿ ಶಹನಾವಾಜ್ ಶೇಖ್ ಎಂಬ ಯುವಕ ಆರಂಭಿಸಿರುವ ಕ್ರಮ ಮುಂಬೈನ ಅನೇಕ ಜನರಿಗೆ ಜೀವಸೆಲೆಯಾಗಿದೆ. ಕೇವಲ ಒಂದು ಫೋನ್ ಕರೆ ಮಾಡಿದರೆ ಸಾಕು ಶೇಖ್ ರೋಗಿಗಳಿಗೆ ಉಚಿತವಾಗಿ ಆಕ್ಸಿಜನ್ ತಲುಪಿಸುತ್ತಾರೆ.
ಕಳೆದ ವರ್ಷದಿಂದ ಇಲ್ಲಿವರೆಗೆ ಸುಮಾರು 5,500 ನಿರ್ಗತಿಕ ರೋಗಿಗಳ ಜೀವ ಉಳಿಸಿದ್ದಾರೆ ಶೇಖ್. ಪ್ರತಿದಿನ, ಸಹಾಯಕ್ಕಾಗಿ ಸುಮಾರು 500 ಜನರು ಅವರಿಗೆ ಕಾಲ್ ಮಾಡುತ್ತಾರೆ. ಕೋವಿಡ್ ಸೋಂಕಿತರಿಗೆ ಉಚಿತವಾಗಿ ಆಮ್ಲಜನಕ ಪೂರೈಕೆ ಮಾಡುವ ಉದ್ದೇಶಕ್ಕಾಗಿ ಹಣವನ್ನು ಸಂಗ್ರಹಿಸುವ ಸಲುವಾಗಿ ಅವರು ಕಳೆದ ವರ್ಷ ತಮ್ಮ ಕಾರನ್ನೇ 22 ಲಕ್ಷ ರೂ.ಗಳಿಗೆ ಮಾರಾಟ ಮಾಡಿದ್ದಾರೆ. ಶೇಖ್ ಅವರ ಧೈರ್ಯ ಮತ್ತು ಸಾಮಾಜಿಕ ಕಾರ್ಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.