ಅಮರಾವತಿ:ಹಿರಿಯ ಅಧಿಕಾರಿಯೊಬ್ಬರ ಕಿರುಕುಳಕ್ಕೆ ಬೇಸತ್ತುಅಮರಾವತಿಯ ಮೆಲ್ಘಾಟ್ ಟೈಗರ್ ರಿಸರ್ವ್ (ಎಂಆರ್ಟಿ) ನಲ್ಲಿ ಕೆಲಸ ಮಾಡುತ್ತಿದ್ದ 28 ವರ್ಷದ ಮಹಿಳಾ ಅರಣ್ಯ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ಆರ್‌ಎಫ್ಓ ದೀಪಾಲಿ ಚವಾಣ್, ಸಾವಿಗೂ ಮುನ್ನ ಡೆತ್ನೋಟ್ ಬರೆದಿದ್ದಾರೆ. ತನ್ನ ಆತ್ಮಹತ್ಯೆ ಪತ್ರದಲ್ಲಿ, ಭಾರತೀಯ ಅರಣ್ಯ ಸೇವೆಯ ಹಿರಿಯ ಅಧಿಕಾರಿಯೊಬ್ಬರ ವಿರುದ್ಧ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯದ ಆರೋಪ ಮಾಡಿದ್ದಾರೆ.
28 ವರ್ಷದ ಆರ್‌ಎಫ್ಓ ದೀಪಾಲಿ ಚವಾಣ್-ಮೋಹಿತೆ ಅವರು ಗುರುವಾರ ತಡರಾತ್ರಿ ಟೈಗರ್ ರಿಸರ್ವ್ ಬಳಿಯ ಹರಿಸಾಲ್ ಗ್ರಾಮದಲ್ಲಿರುವ ತಮ್ಮ ಸರ್ಕಾರಿ ನಿಲಯದಲ್ಲಿ ತಮ್ಮ ಸೇವಾ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ದೀಪಾಲಿಯನ್ನು ನೋಡಿದ ಸಂಬಂಧಿಕರು ಮತ್ತು ಸಹಚರರು ಕೂಡಲೇ ಪೊಲೀಸರಿಗೆ ಮಾಹಿತಿ ರವಾನಿಸಿದರು.
ಅರಣ್ಯ ಮಾಫಿಯಾಗಳ ವಿರುದ್ಧದ ನಿರ್ಭಯತೆಗಾಗಿ ದೀಪಾಲಿ 'ಲೇಡಿ ಸಿಂಗಂ' ಎಂದು ಪ್ರಸಿದ್ಧರಾಗಿದ್ದರು. ದೀಪಾಲಿಯ ಪತಿ ರಾಜೇಶ್ ಮೋಹಿತೆ ಅವರು ಚಿಖಲ್ಧಾರದಲ್ಲಿ ಖಜಾನೆ ಅಧಿಕಾರಿಯಾಗಿದ್ದಾರೆ. ಅವರ ತಾಯಿ ಸಾತಾರಾಗೆ ಹೋಗಿದ್ದಾಗ ದೀಪಾಲಿ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಆತ್ಮಹತ್ಯೆ ಪತ್ರದಲ್ಲಿ ಹೆಸರಿಸಲಾದ ಆರೋಪಿಯನ್ನು ಬಂಧಿಸುವವರೆಗೆ ದೀಪಾಲಿ ಕುಟುಂಬವು ಆಕೆಯ ಅಂತ್ಯಕ್ರಿಯೆ ಮಾಡಲು ನಿರಾಕರಿಸಿತ್ತು. ಕೂಡಲೇ ಎಚ್ಚೆತ್ತ ಅಮರಾವತಿ ಪೊಲೀಸರು ನಾಗ್ಪುರ ರೈಲ್ವೆ ನಿಲ್ದಾಣದಿಂದ ಬೆಂಗಳೂರಿಗೆ ಹೋಗುವುದಕ್ಕೆ ಕಾಯುತ್ತಿದ್ದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿನೋದ್ ಶಿವಕುಮಾರ್ನನ್ನು ಪೊಲೀಸರು ಬಂಧಿಸಿದ್ದಾರೆ.
ವಿನೋದ್ ಶಿವಕುಮಾರ್ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ದೀಪಾಲಿ ಆತ್ಮಹತ್ಯೆ ಪತ್ರದಲ್ಲಿ ಒತ್ತಾಯಿಸಿದ್ದಾರೆ. ಇವನಿಂದಾಗಿ ಮತ್ತೊಬ್ಬರು ಬಲಿಯಾಗುವುದು ಬೇಡವೆಂದು ದೀಪಾಲಿ ಡೆತ್ನೋಟ್ನಲ್ಲಿ ಬರೆದಿದ್ದಾರೆ.
ಈ ಹಿಂದೆ ಹಲವಾರು ಸಂದರ್ಭಗಳಲ್ಲಿ ದೀಪಾಲಿ ಶಿವಕುಮಾರ್ ವಿರುದ್ಧ ತಮ್ಮ ಉನ್ನತ ಅಧಿಕಾರಿ ಎಂಟಿಆರ್ ಫೀಲ್ಡ್ ಡೈರೆಕ್ಟರ್ ಎಂ.ಎಸ್. ರೆಡ್ಡಿ (ಐಎಫ್ಎಸ್) ಗೆ ದೂರು ನೀಡಿದ್ದರು. ಅವರು ತಮ್ಮ ವಾದಗಳನ್ನು ಕಡೆಗಣಿಸಿದ್ದಾರೆ ಎಂದು ಡೆತ್ನೋಟ್ನಲ್ಲಿ ನಮೂದಿಸಿದ್ದಾರೆ.
ಶಿವಕುಮಾರ್ ಅವರಿಗೆ ಕುಡಿಯುವ ಅಭ್ಯಾಸವಿದ್ದ ಬಗ್ಗೆ ದೀಪಾಲಿ ಹೇಳಿಕೊಂಡಿದ್ದರು. ಅಲ್ಲದೆ ಆರೋಪಿ ಶಿವಕುಮಾರ್ ಸಾರ್ವಜನಿಕವಾಗಿ ಮತ್ತು ಖಾಸಗಿಯಾಗಿ ತನ್ನೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದನು ಮತ್ತು ದೈಹಿಕವಾಗಿ ಉಪಯೋಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದನು ಎಂದು ದೀಪಾಲಿ ಡೆತ್ನೋಟ್ನಲ್ಲಿ ಆರೋಪಿಸಿದ್ದಾರೆ.
ಅಮರಾವತಿ ಪೊಲೀಸರು ಆರೋಪಿ ವಿನೋದ್ ಶಿವಕುಮಾರ್ನನ್ನು ಬಂಧಿಸಿದ್ದು, ವಿಚಾರಣೆ ಮುಂದುವರಿಸಿದ್ದಾರೆ.