ಮುಂಬೈ: ಮಹಾರಾಷ್ಟ್ರದಲ್ಲಿ 2ನೇ ಹಂತದ ಕೋವಿಡ್ ಅಬ್ಬರ ಜೋರಾಗಿದ್ದು, ನಿತ್ಯ 50 ಸಾವಿರಕ್ಕೂ ಅಧಿಕ ಪ್ರಕರಣ ದಾಖಲಾಗುತ್ತಿರುವುದು ಅಲ್ಲಿನ ಸರ್ಕಾರದ ನಿದ್ದೆಗೆಡಿಸಿದೆ. ಇದರ ಮಧ್ಯೆ ಕೇಂದ್ರ ಸರ್ಕಾರ ನಮಗೆ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ವ್ಯಾಕ್ಸಿನ್ ನೀಡುತ್ತಿಲ್ಲವೆಂಬ ಆರೋಪ ಸಹ ಮಾಡಿದೆ.
ಇದೇ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅಲ್ಲಿನ ಆರೋಗ್ಯ ಸಚಿವ ರಾಜೇಶ್ ತೋಪೆ, ಕೇಂದ್ರ ಸರ್ಕಾರ ಜನರಿಗೆ ಕೋವಿಡ್ ವ್ಯಾಕ್ಸಿನ್ ನೀಡುವ ಸಾಮರ್ಥ್ಯ ಹೆಚ್ಚಿಸುವಂತೆ ಈಗಾಗಲೇ ಆದೇಶ ನೀಡಿದೆ. ನಮಗೆ ನೀಡುತ್ತಿದ್ದ ವ್ಯಾಕ್ಸಿನ್ ಪ್ರಮಾಣದಲ್ಲಿ 7 ಲಕ್ಷದಿಂದ 17 ಲಕ್ಷಕ್ಕೆ ಏರಿಕೆಯಾಗಿದೆ. ಆದರೆ, ನಮಗೆ ಪ್ರತಿ ವಾರಕ್ಕೆ 40 ಲಕ್ಷ ವ್ಯಾಕ್ಸಿನ್ ಅವಶ್ಯಕತೆ ಇದ್ದು, ಕೇಂದ್ರ ನೀಡುತ್ತಿರುವ 17 ಲಕ್ಷ ವ್ಯಾಕ್ಸಿನ್ ಸಾಕಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್ ಹಾಗೂ ಹರಿಯಾಣಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಕೋವಿಡ್ ವ್ಯಾಕ್ಸಿನ್ ನೀಡಿದ್ದು, ನಮಗೆ ಮಾತ್ರ ಕಡಿಮೆ ನೀಡುತ್ತಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಜತೆ ನಾನು ಹಾಗೂ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಜೀ ಮಾತುಕತೆ ನಡೆಸಿದ್ದೇವೆ. ರಾಜ್ಯದಲ್ಲಿ 12 ಕೋಟಿ ಜನಸಂಖ್ಯೆ ಇರುವ ಕಾರಣ ಅತಿ ಹೆಚ್ಚು ಕೋವಿಡ್ ಪ್ರಕರಣ ಪತ್ತೆಯಾಗುತ್ತಿವೆ. ಕಡಿಮೆ ಲಸಿಕೆ ನೀಡಿದ್ರೆ ಕೊರೊನಾ ವಿರುದ್ಧ ಹೋರಾಟ ನಡೆಸುವುದು ಹೇಗೆ? ಎಂದು ಪ್ರಶ್ನೆ ಮಾಡಿದ್ದಾರೆ.