ಮುಂಬೈ(ಮಹಾರಾಷ್ಟ್ರ): ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿರುವ ಬೆನ್ನಲ್ಲೇ ಏಕನಾಥ್ ಶಿಂದೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ರಾಜ್ಯದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ವ್ಯಾಟ್ ದರ ಕಡಿತಗೊಳಿಸಿ ಆದೇಶ ಹೊರಡಿಸುವುದಾಗಿ ಘೋಷಣೆ ಮಾಡಿದ್ದಾರೆ. ವಿಧಾನಸಭೆಯಲ್ಲಿ ವಿಶ್ವಾಸಮತ ಗೆದ್ದ ಬೆನ್ನಲ್ಲೇ ಈ ಘೋಷಣೆ ಮಾಡಿರುವ ಅವರು, ಇಂಧನದ ಮೇಲಿನ ವ್ಯಾಟ್ ಇಳಿಕೆ ಮಾಡಲಾಗುವುದು ಎಂದಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಮಹತ್ವದ ಕೇಂದ್ರ ಸರ್ಕಾರ ತೈಲದ ಮೇಲೆ ವ್ಯಾಟ್ ಕಡಿತಗೊಳಿಸಿ ಆದೇಶ ಹೊರಡಿಸಿತ್ತು. ಆದರೆ, ಮಹಾರಾಷ್ಟ್ರ ಸರ್ಕಾರ ಇಂಧನ ಬೆಲೆಯಲ್ಲಿ ಯಾವುದೇ ರೀತಿಯ ಇಳಿಕೆ ಮಾಡಿರಲಿಲ್ಲ. ಇದೀಗ ಅಧಿಕಾರದ ಚುಕ್ಕಾಣಿ ಹಿಡಿದಿರುವ ಏಕನಾಥ್ ಶಿಂದೆ ನೇತೃತ್ವದ ಹೊಸ ಸರ್ಕಾರ ಈ ಘೋಷಣೆ ಮಾಡಿದೆ.
ಕಣ್ಣೀರು ಹಾಕಿದ ಏಕನಾಥ್ ಶಿಂದೆ: ವಿಶ್ವಾಸಮತ ಗೆದ್ದ ಬಳಿಕ ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಏಕನಾಥ್ ಶಿಂದೆ, ಕುಟುಂಬವನ್ನ ನೆನಪಿಸಿಕೊಂಡು ಕಣ್ಣೀರು ಹಾಕಿದರು. ಥಾಣೆಯಲ್ಲಿ ಶಿವಸೇನೆಯ ಕಾರ್ಪೋರೇಟರ್ ಆಗಿ ಕೆಲಸ ಮಾಡ್ತಿದ್ದಾಗ ನನ್ನ ಎರಡು ಮಕ್ಕಳನ್ನು ಕಳೆದುಕೊಂಡೆ. ಈ ವೇಳೆ ಎಲ್ಲವೂ ಮುಗಿದು ಹೋಯಿತು ಎಂದು ಭಾವಿಸಿದೆ. ಆದರೆ, ಶಿವಸೇನೆಯ ಆನಂದ್ ದಿಘೆ ಸಾಹೇಬ್ ನನಗೆ ಮನವರಿಕೆ ಮಾಡಿಕೊಟ್ಟರು. ಹೀಗಾಗಿ ರಾಜಕೀಯದಲ್ಲಿ ಮುಂದುವರೆಯಬೇಕಾಯಿತು ಎಂದರು.
ವಿಪಕ್ಷ ನಾಯಕನಾಗಿ ಅಜಿತ್ ಪವಾರ್:ಮಹಾರಾಷ್ಟ್ರದಲ್ಲಿ ಇದೀಗ ಶಿವಸೇನೆ+ ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದು, ಇಂದು ನಡೆದ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನನ್ನಾಗಿ ಎನ್ಸಿಪಿಯ ಅಜಿತ್ ಪವಾರ್ ಅವರನ್ನ ಆಯ್ಕೆ ಮಾಡಲಾಗಿದೆ. ಮಹಾರಾಷ್ಟ್ರದಲ್ಲಿ ಎನ್ಸಿಪಿ 56 ಶಾಸಕರ ಬಲ ಹೊಂದಿದ್ದು, ಬಿಜೆಪಿ ಬಳಿಕ ಎರಡನೇ ಅತಿದೊಡ್ಡ ಪಕ್ಷವಾಗಿದೆ.