ಮುಂಬೈ(ಮಹಾರಾಷ್ಟ್ರ):ಮಹಾರಾಷ್ಟ್ರದಲ್ಲಿ ಕೊರೊನಾ ಆರ್ಭಟ ಜೋರಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಅಲ್ಲಿನ ಸರ್ಕಾರ ಇದೀಗ ಮಹತ್ವದ ನಿರ್ಧಾರ ಕೈಗೊಂಡಿದೆ. ಸೋಮವಾರದಿಂದಲೇ ಈಜುಕೊಳ, ಜಿಮ್ಸ್ ಸೇರಿದಂತೆ ಪ್ರಮುಖ ಶಾಪ್ಗಳನ್ನ ಬಂದ್ ಮಾಡಲು ತೀರ್ಮಾನಿಸಿದೆ.
ಪ್ರಮುಖವಾಗಿ ಸ್ಪಾ, ಬ್ಯೂಟಿ ಪಾರ್ಲರ್, ಮೃಗಾಲಯಗಳು, ವಸ್ತುಸಂಗ್ರಹಾಲಯಗಳು, ಕ್ರೀಡಾಂಗಣಗಳು, ವಾಣಿಜ್ಯ ಸಂಕೀರ್ಣ ಮತ್ತು ಮನೋರಂಜನಾ ಸ್ಥಳಗಳನ್ನ ಸಂಪೂರ್ಣವಾಗಿ ಬಂದ್ ಮಾಡಲು ನಿರ್ಧರಿಸಲಾಗಿದೆ. ಉಳಿದಂತೆ ಫೆಬ್ರವರಿ 15ರವರೆಗೆ ಶಾಲಾ-ಕಾಲೇಜ್ಗಳು ಬಂದ್ ಆಗಲಿವೆ. ಹೇರ್ ಕಟಿಂಗ್ ಸಲೂನ್ಗಳು ಮತ್ತು ಶಾಪಿಂಗ್ ಮಾಲ್ ಶೇ. 50ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಲಿವೆ.
ದೇಶದಲ್ಲಿ ಕೊರೊನಾ ಆರ್ಭಟ ಜೋರಾಗಿರುವ ಕಾರಣ ಈಗಾಗಲೇ ಕರ್ನಾಟಕ, ಉತ್ತರ ಪ್ರದೇಶ, ರಾಜಸ್ಥಾನ ಸೇರಿದಂತೆ ಅನೇಕ ರಾಜ್ಯಗಳಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಇದೀಗ ಮಹಾರಾಷ್ಟ್ರ ಕೂಡ ಈ ಸಾಲಿಗೆ ಸೇರಿಕೊಂಡಿದೆ. ಜನವರಿ 10ರಿಂದ ಮಹಾರಾಷ್ಟ್ರದಲ್ಲಿ ರಾತ್ರಿ 11 ಗಂಟೆಯಿಂದ ಬೆಳಗ್ಗೆ 5ರವರೆಗೆ ನೈಟ್ ಕರ್ಫ್ಯೂ ಜಾರಿಯಾಗಲಿದ್ದು, ಐದಕ್ಕಿಂತಲೂ ಹೆಚ್ಚಿನ ಜನರು ಒಟ್ಟಿಗೆ ಸೇರಲು ಅವಕಾಶವಿರುವುದಿಲ್ಲ ಎಂದು ಸೂಚನೆ ಹೊರಡಿಸಲಾಗಿದೆ.