ಮುಂಬೈ:ಮಹಾರಾಷ್ಟ್ರದಲ್ಲಿ ಕಳೆದ ಕೆಲ ದಿನಗಳಿಂದ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಇದೇ ಕಾರಣಕ್ಕಾಗಿ ರಾಜ್ಯದಲ್ಲಿ ಈಗಾಗಲೇ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಇಷ್ಟಾದರೂ ಡೆಡ್ಲಿ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖ ಕಂಡು ಬಂದಿಲ್ಲ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಸಲಾಗಿದ್ದು, ಸದ್ಯ ಜಾರಿಯಲ್ಲಿರುವ ಲಾಕ್ಡೌನ್ ಮುಂದಿನ 15 ದಿನಗಳ ಕಾಲ ವಿಸ್ತರಣೆ ಮಾಡುವ ಉದ್ದೇಶ ಇಟ್ಟುಕೊಳ್ಳಲಾಗಿದೆ ಎಂದು ಅಲ್ಲಿನ ಆರೋಗ್ಯ ಸಚಿವ ರಾಜೇಶ್ ತೋಪೆ ತಿಳಿಸಿದ್ದಾರೆ.
ಸಚಿವ ಸಂಪುಟ ಸಭೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಪ್ರಸ್ತುತ ಕೋವಿಡ್ ನಿರ್ಬಂಧವನ್ನು ಮುಂದಿನ 15 ದಿನ ವಿಸ್ತರಿಸಬೇಕು ಎಂದು ಕ್ಯಾಬಿನೆಟ್ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ. ಜತೆಗೆ ವ್ಯಾಕ್ಸಿನೇಷನ್ ನೀಡಲು ನಮಗೆ ಎಲ್ಲ ಮೂಲ ಸೌಕರ್ಯಗಳಿವೆ. ಆದರೆ ನಮ್ಮಲ್ಲಿ ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ಇಲ್ಲ. ವಿವಿಧ ಲಸಿಕೆ ತಯಾರಕರೊಂದಿಗೆ ಸಿಎಂ ಮಾತನಾಡುತ್ತಿದ್ದಾರೆ. 18-44 ವರ್ಷದೊಳಗಿನವರಿಗೆ ಲಸಿಕೆ ಹಾಕಲು ಪ್ರತ್ಯೇಕ ಕೇಂದ್ರಗಳು ಇರಲಿವೆ. ಸದ್ಯದ ಸ್ಥಿತಿಯಲ್ಲಿ ಮೇ 1ರಿಂದ ವ್ಯಾಕ್ಸಿನ್ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.