ಮುಂಬೈ(ಮಹಾರಾಷ್ಟ್ರ):ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿರುವ ರೂಪಾಂತರ ಕೋವಿಡ್ 'ಓಮಿಕ್ರೋನ್' ಇದೀಗ ಭಾರತದಲ್ಲೂ ಭಯ ಹುಟ್ಟಿಸಿದೆ. ಇದೇ ವಿಚಾರವಾಗಿ ಕೇಂದ್ರ ಆರೋಗ್ಯ ಇಲಾಖೆ ಈಗಾಗಲೇ ಅನೇಕ ಮಹತ್ವದ ನಿರ್ಧಾರ ಕೈಗೊಂಡಿದೆ. ಇದರ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರ ಕೂಡ ಎಚ್ಚೆತ್ತುಕೊಂಡಿದ್ದು, ಅಂತಾರಾಷ್ಟ್ರೀಯ ಹಾಗೂ ದೇಶಿ ವಿಮಾನಯಾನ ಪ್ರಯಾಣಿಕರಿಗೆ ಕೆಲವೊಂದು ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ.
ಮಹಾರಾಷ್ಟ್ರದಿಂದ ವಿವಿಧ ದೇಶಗಳಿಗೆ ಪ್ರಯಾಣ ಬೆಳೆಸುವ ಹಾಗೂ ಅಲ್ಲಿಂದ ಬರುವ ಪ್ರವಾಸಿಗರು ಕೇಂದ್ರ ಸರ್ಕಾರದ ಮಾರ್ಗಸೂಚಿ ಪಾಲನೆ ಮಾಡುವುದು ಕಡ್ಡಾಯಗೊಳಿಸಿದೆ. ಜೊತೆಗೆ ದೇಶಿ ಪ್ರಯಾಣಿಕರು ಕೋವಿಡ್ನ ಎರಡು ಡೋಸ್ ಪಡೆದಿರುವುದು ಅಥವಾ 72 ಗಂಟೆಯೊಳಗೆ ಆರ್ಟಿಪಿಸಿಆರ್ ಪರೀಕ್ಷೆ ಮಾಡಿಸಿರುವ ವರದಿ ಹೊಂದಿರುವುದು ಕಡ್ಡಾಯವಾಗಿದೆ.
ದಕ್ಷಿಣ ಆಫ್ರಿಕಾದಲ್ಲಿ ಓಮಿಕ್ರೋನ್ ಕಾಣಿಸಿಕೊಳ್ಳುತ್ತಿದ್ದಂತೆ ಮಹಾರಾಷ್ಟ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದು, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಸೇರಿದಂತೆ ಕೆಲ ನಿಯಮ ಜಾರಿಗೊಳಿಸಿದೆ. ದಕ್ಷಿಣ ಆಫ್ರಿಕಾದಿಂದ ಬರುವ ಪ್ರಯಾಣಿಕರನ್ನ ಮುಂಬೈನಲ್ಲಿ ಕ್ವಾರಂಟೈನ್ ಮಾಡುವ ನಿರ್ಧಾರ ಕೈಗೊಳ್ಳಲಾಗಿದ್ದು, ಎಲ್ಲರೂ ಕಡ್ಡಾಯವಾಗಿ ಕ್ವಾರಂಟೈನ್ಗೊಳಗಾಗಲಿದ್ದಾರೆಂದು ಮುಂಬೈ ಮೇಯರ್ ಕಿಶೋರಿ ಪೆಡ್ನೇಕರ್ ತಿಳಿಸಿದ್ದಾರೆ.
ಇದನ್ನೂ ಓದಿರಿ:Omicron variant: ಮೋದಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ, ಕೆಲ ದೇಶಗಳ ಮೇಲೆ ನಿಗಾ ಇಡಲು ಸೂಚನೆ
ಕೊರೊನಾ ವೈರಸ್ನ ಹಿಂದಿನ ರೂಪಾಂತರಗಳಿಗೆ ಹೋಲಿಕೆ ಮಾಡಿದಾಗ ಇದೀಗ ದಕ್ಷಿಣ ಆಫ್ರಿಕಾದಲ್ಲಿ ಕಂಡು ಬಂದಿರುವ ಓಮಿಕ್ರೋನ್ ಹೆಚ್ಚಿನ ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೇಯರ್ ತಿಳಿಸಿದ್ದಾರೆ. ವಿದೇಶಗಳಲ್ಲಿ ಕೊರೊನಾ ಹೆಚ್ಚಿನ ಆತಂಕ ಸೃಷ್ಟಿಸಿದ್ದು, ಹೊರಗಿನಿಂದ ಬರುವವರ ಮೇಲೆ ಹೆಚ್ಚಿನ ನಿಗಾ ಇಡಲಾಗಿದೆ. ರಾಜ್ಯ ಸರ್ಕಾರ ಹಾಗೂ ಮುಂಬೈ ಮುನ್ಸಿಪಲ್ ತೆಗೆದುಕೊಂಡಿರುವ ನಿಯಮ ಉಲ್ಲಂಘನೆ ಮಾಡುವವರ ಮೇಲೆ ದಂಡ ವಿಧಿಸಲು ಮುಂದಾಗಿದೆ ಎಂದರು.