ಮುಂಬೈ:ಮಹಾರಾಷ್ಟ್ರದ ಜಲ್ನಾ ಜಿಲ್ಲೆಯಲ್ಲಿ ಮರಾಠಾ ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದ ಪ್ರತಿಭಟನಾಕಾರರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸೋಮವಾರ ಭರವಸೆ ನೀಡಿದ್ದಾರೆ. ಸೆಪ್ಟೆಂಬರ್ 1ರಂದು ಜಲ್ನಾ ಜಿಲ್ಲೆಯ ಅಂತರವಾಲಿ ಸಾರತಿ ಗ್ರಾಮದಲ್ಲಿ ನಡೆದ ಹೋರಾಟದಲ್ಲಿ ನಿರತರಾಗಿದ್ದವರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರು. ಅನೇಕ ಹೋರಾಟಗಾರರ ಮೇಲೆ ಎಫ್‌ಐಆರ್ ದಾಖಲಿಸಿದ್ದರು. ಲಾಠಿ ಚಾರ್ಜ್ ಮಾಡಿರುವ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸುವುದಾಗಿ ಮತ್ತು ಮರಾಠಿ ಪ್ರತಿಭಟನಾಕಾರರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವುದಾಗಿ ಸಿಎಂ ಘೋಷಣೆ ಮಾಡಿದ್ದಾರೆ.
ಘಟನೆಯ ಹಿನ್ನೆಲೆ:ಮರಾಠಾ ಸಮುದಾಯಕ್ಕೆ ಒಬಿಸಿ ವರ್ಗದಡಿ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡುವಂತೆ ಆಗ್ರಹಿಸಿ ಜಲ್ನಾ ಜಿಲ್ಲೆಯ ಅಂತರವಾಲಿ ಸಾರತಿ ಗ್ರಾಮದಲ್ಲಿ ಆಗಸ್ಟ್ 29ರಿಂದ ಕಾರ್ಯಕರ್ತರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಉಪವಾಸನಿರತ ವ್ಯಕ್ತಿಯೊಬ್ಬರನ್ನು ಆಸ್ಪತ್ರೆಗೆ ಸೇರಿಸಲು ಪ್ರತಿಭಟನಾಕಾರರು ನಿರಾಕರಿಸಿದ್ದರಿಂದ ಗುಂಪು ಚದುರಿಸಲು ಪೊಲೀಸರು ಲಾಠಿ ಬೀಸಿದ್ದರು. ಅಶ್ರುವಾಯು ಶೆಲ್‌ಗಳನ್ನೂ ಸಿಡಿಸಿದ್ದರು. ಹಿಂಸಾಚಾರದಲ್ಲಿ 40 ಪೊಲೀಸ್ ಸಿಬ್ಬಂದಿ ಸೇರಿದಂತೆ ಹಲವರು ಗಾಯಗೊಂಡಿದ್ದರು. 15ಕ್ಕೂ ಹೆಚ್ಚು ಸರ್ಕಾರಿ ಬಸ್‌ಗಳಿಗೆ ಬೆಂಕಿ ಹಚ್ಚಲಾಗಿತ್ತು. ಹೀಗಾಗಿ ಹಲವು ಹೋರಾಟಗಾರರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಮೀಸಲಾತಿ ಹೋರಾಟ ತೀವ್ರಗೊಳ್ಳುತ್ತಿದ್ದಂತೆ ಮತ್ತು ಸರ್ಕಾರದ ವಿರುದ್ಧ ಆಕ್ರೋಶ ಹೆಚ್ಚುತ್ತಿದ್ದಂತೆ ಎಚ್ಚೆತ್ತ ಸರ್ಕಾರ, ಪ್ರತಿಭಟನಾಕಾರರ ವಿರುದ್ಧ ದಾಖಲಾಗಿರುವ ಪೊಲೀಸ್ ಕೇಸ್ಗಳನ್ನು ಹಿಂಪಡೆಯಲು ತೀರ್ಮಾನಿಸಿದೆ. ಈ ಕುರಿತು ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಲಾಗಿದೆ ಎಂದು ಮುಖ್ಯಮಂತ್ರಿ ಶಿಂಧೆ ಸುದ್ದಿಗಾರರಿಗೆ ತಿಳಿಸಿದರು.
ಸಿಎಂ ಜೊತೆ ಸಭೆಯಲ್ಲಿ ಭಾಗವಹಿಸಿದ ಎಲ್ಲಾ ಪಕ್ಷಗಳು ಜಾರಂಜ್ ಅವರ ಉಪವಾಸವನ್ನು ಹಿಂಪಡೆಯಲು ವಿನಂತಿಸುವ ನಿರ್ಣಯವನ್ನು ಅಂಗೀಕರಿಸಿದವು ಎಂದು ಶಿಂಧೆ ಪ್ರಕಟಿಸಿದರು. ಮಹಾರಾಷ್ಟ್ರ ಪ್ರಗತಿಪರ ರಾಜ್ಯವಾಗಿದೆ. ನಾವು ಎಲ್ಲಾ ಸಮುದಾಯಗಳ ನಡುವೆ ಸಾಮರಸ್ಯ ಮತ್ತು ಶಾಂತಿಯನ್ನು ಬಯಸುತ್ತೇವೆ ಎಂದು ಹೇಳಿದರು.