ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಬದ್ಲಾಪುರದಲ್ಲಿನ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ನಿನ್ನೆ ರಾತ್ರಿ ಅನಿಲ ಸೋರಿಕೆಯಾಗಿದ್ದು, ಇದರ ಪ್ರಭಾವ ಮೂರು ಕಿ.ಮೀ ವ್ಯಾಪ್ತಿಯಲ್ಲಿನ ಜನರ ಮೇಲೆ ಬೀರಿದೆ. ಉಸಿರಾಟ ಹಾಗೂ ಕಣ್ಣು ಉರಿ ಸಮಸ್ಯೆಯಾಗಿ ಜನರು ಆತಂಕಕ್ಕೊಳಗಾಗಿದ್ದಾರೆ.
ಥಾಣೆಯ ರಾಸಾಯನಿಕ ಕಾರ್ಖಾನೆಯಲ್ಲಿ ಗ್ಯಾಸ್ ಸೋರಿಕೆ
ಮಹಾರಾಷ್ಟ್ರದ ಬದ್ಲಾಪುರದಲ್ಲಿನ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಅನಿಲ ಸೋರಿಕೆಯಾಗಿ ಜನರು ಉಸಿರಾಟ ಹಾಗೂ ಕಣ್ಣು ಉರಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ನೊಬೆಲ್ ಇಂಟರ್ಮೀಡಿಯೇಟ್ಸ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯಲ್ಲಿ ನಿನ್ನೆ ರಾತ್ರಿ 10.22ರ ವೇಳೆಗೆ ಗ್ಯಾಸ್ ಲೀಕ್ ಆಗಿದ್ದು, ಮಾಹಿತಿ ಪಡೆದ ತಕ್ಷಣವೇ ಅಗ್ನಿಶಾಮಕ ದಳ ಸ್ಥಳಕ್ಕೆ ತೆರಳಿ ರಾತ್ರಿ 11.24ರಷ್ಟೊತ್ತಿಗೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಥಾಣೆ ಮಹಾನಗರ ಪಾಲಿಕೆ ತಿಳಿಸಿದೆ.
ಕಾರ್ಖಾನೆಯಲ್ಲಿ ಅತಿಯಾದ ಉಷ್ಣತೆಯಿಂದಾಗಿ ಸಲ್ಫ್ಯೂರಿಕ್ ಆಮ್ಲ ಮತ್ತು ಬೆಂಜೈಲ್ ಆಮ್ಲದ ನಡುವೆ ಕೆಮಿಕಲ್ ರಿಯಾಕ್ಷನ್ ಆಗಿ ಅನಿಲ ಸೋರಿಕೆಯಾಗಿದೆ. ಈ ಪ್ರದೇಶದ ಜನರು ಉಸಿರಾಟ ಮತ್ತು ಕಣ್ಣು ಉರಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಇವರನ್ನು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.