ಪುಣೆ (ಮಹಾರಾಷ್ಟ್ರ): ಕೇವಲ ಐದು ದಿನಗಳ ಅಂತರದಲ್ಲಿ ನಾಲ್ವರ ಮೃತದೇಹಗಳು ಪತ್ತೆಯಾಗಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯ ದೌಂಡ್ ತಾಲೂಕಿನಲ್ಲಿ ನಡೆದಿದೆ. ಇಲ್ಲಿನ ಪರ್ಗಾಂವ್ ಗ್ರಾಮದ ಭೀಮಾ ನದಿಯಲ್ಲಿ ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರ ಶವಗಳು ಕಂಡು ಬಂದಿದ್ದು, ಇಡೀ ಪ್ರದೇಶದಲ್ಲಿ ಸಂಚಲನ ಮೂಡಿಸಿದೆ.
ಇದನ್ನೂ ಓದಿ:ಕಾಲೇಜು ಬಾತ್ರೂಂನಲ್ಲೇ ವಿದ್ಯಾರ್ಥಿನಿ ಆತ್ಮಹತ್ಯೆ
ಭೀಮಾ ನದಿಯಲ್ಲಿ ಜನವರಿ 18ರಂದು ಸ್ಥಳೀಯ ಮೀನುಗಾರರು ಮೀನುಗಾರಿಕೆ ನಡೆಸುತ್ತಿದ್ದರು. ಈ ವೇಳೆ, ಮಹಿಳೆಯೊಬ್ಬರ ಶವ ಪತ್ತೆಯಾಗಿದೆ. ಇದಾದ ಎರಡು ದಿನಗಳ ಅಂತರದಲ್ಲೇ ಎಂದರೆ ಜನವರಿ 20ರಂದು ಪುರುಷನ ಶವ ಪತ್ತೆಯಾಗಿದೆ. ಇದರ ಮರುದಿನೇ ಎಂದರೆ ಜನವರಿ 21ರಂದು ಮತ್ತೊಬ್ಬ ಮಹಿಳೆಯ ಮೃತದೇಹ ಕಾಣಿಸಿಕೊಂಡಿದೆ. ಅಷ್ಟೇ ಅಲ್ಲ, 23ರಂದು ಕೂಡ ಮತ್ತೋರ್ವ ಪುರುಷನ ಮೃತದೇಹವು ಪತ್ತೆಯಾಗಿದೆ. ಹೀಗೆ ಕೇವಲ ಐದು ದಿನಗಳ ಅಂತರದಲ್ಲಿ ಒಟ್ಟು ನಾಲ್ಕು ಮೃತದೇಹಗಳು ನದಿಯಲ್ಲಿ ಪತ್ತೆಯಾಗಿವೆ.
ಮಹಾರಾಷ್ಟ್ರದ ಪುಣೆ ಜಿಲ್ಲೆಯ ಭೀಮಾ ನದಿ ಬಳಿ ಪೊಲೀಸರು ಪರಿಶೀಲನೆ ನಡೆಸಿದರು. ನಾಲ್ವರು ಒಂದೇ ಕುಟುಂಬಕ್ಕೆ ಸೇರಿರುವ ಶಂಕೆ: ಈ ಮೃತ ನಾಲ್ವರು ವಯಸ್ಸು ಅಂದಾಜು 38ರಿಂದ 45 ವರ್ಷದೊಳಗಿರುವ ಶಂಕೆ ವ್ಯಕ್ತವಾಗಿದ್ದು, ಇವೆರಲ್ಲೂ ಕೂಡ ಒಂದೇ ಕುಟುಂಬಕ್ಕೆ ಸೇರಿದವರು ಎಂಬ ಅನುಮಾನವೂ ಇದೆ. ಅಲ್ಲದೇ, ಇವರು ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರು ಆಗಿದ್ದರಿಂದ ನಾಲ್ವರು ಕೂಡ ಗಂಡ ಮತ್ತು ಹೆಂಡತಿಯಾಗಿರುವ ಸಾಧ್ಯತೆ ಎಂಬ ಸಂಶಯ ವ್ಯಕ್ತವಾಗಿದೆ.
ಸ್ಥಳಕ್ಕೆ ಪೊಲೀಸರ ದೌಡು: ಭೀಮಾ ನದಿಯಲ್ಲಿ ನಾಲ್ವರು ಮೃತದೇಹಗಳು ಪತ್ತೆಯಾದ ವಿಷಯವು ಸ್ಥಳೀಯ ಜನರು ಆತಂಕಕ್ಕೂ ಕಾರಣವಾಗಿದೆ. ಮತ್ತೊಂದೆಡೆ, ಪುಣೆ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಅಂಕಿತ್ ಗೋಯಲ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ನದಿ ಪಾತ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಪತ್ತೆಯಾದ ನಾಲ್ಕು ಶವಗಳ ಪೈಕಿ ಮೂರು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಪೊಲೀಸರು ರವಾನಿಸಿದ್ದಾರೆ.
ಮೃತರ ಗುರುತು ಪತ್ತೆ ಕಾರ್ಯ:ಮೃತ ನಾಲ್ವರು ಸಹ ಯಾವ ಗ್ರಾಮದವರು ಮತ್ತು ಎಲ್ಲಿಯವರು ಎಂಬುವುದು ಇನ್ನೂ ಗೊತ್ತಾಗಿಲ್ಲ. ಆದರೆ, ಮೃತ ದೇಹಗಳೊಂದಿಗೆ ಕೀಲಿಯೊಂದು ದೊರೆತಿದೆ. ಮೃತ ಮಹಿಳೆಯೊಬ್ಬರ ಬಟ್ಟೆಯಲ್ಲಿ ಮೊಬೈಲ್ ಫೋನ್ ಮತ್ತು ಚಿನ್ನಾಭರಣ ಖರೀದಿಸಿದ ರಶೀದಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೀಗಾಗಿಯೇ, ಪೊಲೀಸರು ಮೃತರು ಗುರುತು ಪತ್ತೆ ಕಾರ್ಯ ಆರಂಭಿಸಿದ್ದಾರೆ.
ನದಿಯಲ್ಲಿ ಮಕ್ಕಳು ಸಹ ಬಿದ್ದಿದ್ದಾರಾ?: ಇವರು ಒಂದೇ ಕುಟುಂಬಕ್ಕೆ ಸೇರಿದವರು ಹಾಗೂ ಗಂಡ ಮತ್ತು ಹೆಂಡತಿ ಎಂಬ ಶಂಕೆಯಾಗಿರುವ ಬೆನ್ನಲ್ಲೇ, ಇವರೊಂದಿಗೆ ಮಕ್ಕಳು ಸಹ ನದಿಗೆ ಬಿದ್ದಿದ್ದಾರಾ ಎಂಬ ಅನುಮಾನವನ್ನೂ ಪೊಲೀಸರು ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಭೀಮಾ ನದಿ ಜಲಾನಯನ ಪ್ರದೇಶದಲ್ಲಿ ಪೊಲೀಸರು ತೀವ್ರ ಶೋಧ ಆರಂಭಿಸಿದ್ದಾರೆ. ಇದೇ ವೇಳೆ ಯಾವ ಕಾರಣಕ್ಕಾಗಿ ನಾಲ್ವರು ನದಿಗೆ ಬಿದ್ದಿದ್ದಾರೆ ಎಂಬುವುದೂ ಗೊತ್ತಾಗಿಲ್ಲ. ಈ ಎಲ್ಲ ನಿಟ್ಟಿನಲ್ಲೂ ಪೊಲೀಸರು ತನಿಖೆ ನಡೆಸಲು ಮುಂದಾಗಿದ್ದು, ಸದ್ಯ ಮರಣೋತ್ತರ ಪರೀಕ್ಷೆ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.
ಇದನ್ನೂ ಓದಿ:ಮಹಿಳೆಯ ತಲೆ ಮೇಲೆ ಹರಿದ ಬಸ್: ಯಶವಂತಪುರ ಬಳಿ ಭೀಕರ ಅಪಘಾತ