ಮುಂಬೈ(ಮಹಾರಾಷ್ಟ್ರ):ಅಕ್ರಮ ಸಾಯಿ ರೆಸಾರ್ಟ್ ಪ್ರಕರಣದಲ್ಲಿ ಅಮಾನತು ಆಗಿರುವ ಉಪವಿಭಾಗಾಧಿಕಾರಿ (ಎಸ್‌ಡಿಒ) ದಾಪೋಲಿ ಜಯರಾಮ್ ದೇಶಪಾಂಡೆ ಅವರನ್ನು ಜಾರಿ ನಿರ್ದೇಶನಾಲಯ ಮಂಗಳವಾರ ಬಂಧಿಸಿದೆ.
ದಾಪೋಲಿ ಜಯರಾಮ್ ದೇಶಪಾಂಡೆ ಇಡಿ ವಶಕ್ಕೆ:ಉದ್ಧವ್ ಠಾಕ್ರೆ ಹಾಗೂ ಏಕನಾಥ್ ಶಿಂಧೆ ನಡುವಿನ ತೀವ್ರ ಪೈಪೋಟಿಯ ಮಧ್ಯೆಯೇ, ಶಿವಸೇನಾ ಉದ್ಧವ್ ಬಾಳಾಸಾಹೇಬ್ ಠಾಕ್ರೆ (ಯುಬಿಟಿ) ನಾಯಕ ಅನಿಲ್ ಪರಬ್ ಅವರ ಆಪ್ತ ಸ್ನೇಹಿತ ಸದಾನಂದ್ ಕದಂ ಅವರ ಒಡೆತನದ ಸಾಯಿ ರೆಸಾರ್ಟ್ ನಿರ್ಮಾಣಕ್ಕಾಗಿ ಅಕ್ರಮ ಭೂಮಿ ವರ್ಗಾಯಿಸಿದ ಹಿನ್ನೆಲೆ ತಮ್ಮ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡ ಆರೋಪದಲ್ಲಿ ಜಾರಿ ನಿರ್ದೇಶನಾಲಯವು ಉಪವಿಭಾಗಾಧಿಕಾರಿ (ಎಸ್‌ಡಿಒ) ದಾಪೋಲಿ ಜಯರಾಮ್ ದೇಶಪಾಂಡೆ ಅವರನ್ನು ವಶಕ್ಕೆ ಪಡೆದಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ:ಈ ಹಿಂದೆ, ಏಕನಾಥ್ ಶಿಂಧೆ ಸರ್ಕಾರವು ಅಕ್ರಮ ಸಾಯಿ ರೆಸಾರ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪವಿಭಾಗಾಧಿಕಾರಿ (ಎಸ್‌ಡಿಒ) ದಾಪೋಲಿ ಜಯರಾಮ್ ದೇಶಪಾಂಡೆ ಅವರನ್ನು ಅಮಾನತು ಮಾಡಿ, ಜನವರಿಯಲ್ಲಿ ಆದೇಶ ಹೊರಡಿಸಿತ್ತು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಪ್ರಕರಣದಲ್ಲಿ ಇಡಿ ಅವರ ಹೇಳಿಕೆಯನ್ನೂ ದಾಖಲಿಸಿಕೊಂಡಿತ್ತು. ಕೆಲ ವರ್ಷಗಳ ಹಿಂದೆ, ಈ ಜಾಗವನ್ನು ಸೇನಾ ನಾಯಕ ಪರಬ್ ಖರೀದಿಸಿ, ಕದಂ ಎಂಬುವವರಿಗೆ ಮಾರಾಟ ಮಾಡಿದ್ದರು. ಆ ಜಾಗದಲ್ಲಿಯೇ ಸಾಯಿ ರೆಸಾರ್ಟ್ ನಿರ್ಮಿಸಿರುವುದು ತಿಳಿದು ಬಂದಿದೆ.
ಪರಿಸರ ಸಂರಕ್ಷಣೆ ನಿಯಮಗಳ ಉಲ್ಲಂಘನೆ:ಸರ್ಕಾರದ ಪರಿಸರ ಸಂರಕ್ಷಣೆ ನಿಯಮಗಳನ್ನು ಉಲ್ಲಂಘಿಸಿ, ಅಕ್ರಮವಾಗಿ ಈ ರೆಸಾರ್ಟ್ ನಿರ್ಮಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪರಾಬ್ ಮತ್ತು ಕದಂ ವಿರುದ್ಧ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ತನಿಖೆ ಆರಂಭಿಸಿದೆ. ಪರಿಸರದ ನಿಯಮಗಳನ್ನು ಗಾಳಿಗೆ ತೂರಿ ರೆಸಾರ್ಟ್ ನಿರ್ಮಾಣ ಮಾಡಲಾಗಿದೆ. ಭೂ ವ್ಯವಹಾರದಲ್ಲಿ ಅಕ್ರಮ ನಡೆದಿರುವುದು ಸ್ಪಷ್ಟವಾಗಿದೆ.
10.2 ಕೋಟಿ ರೂಪಾಯಿ ಮೌಲ್ಯದ ಭೂಮಿಯಲ್ಲಿ ಅಕ್ರಮವಾಗಿ ರೆಸಾರ್ಟ್ ನಿರ್ಮಿಸಲಾಗಿದೆ. ದೇಶಪಾಂಡೆ ಅವರು ಈ ರೆಸಾರ್ಟ್ ನಿರ್ಮಾಣಕ್ಕೆ ಅಕ್ರಮವಾಗಿ ಅನುಮತಿ ನೀಡಿರುವ ಬಗ್ಗೆ ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
ಇಡಿ ಅಧಿಕಾರಿಗಳು ಹೇಳಿದ್ದೇನು?:ಇಡಿ ಅಧಿಕಾರಿಗಳ ಪ್ರಕಾರ, ಪಿಎಂಎಲ್‌ಎ ಪ್ರಕರಣದ ತನಿಖೆಯಿಂದ ಪರಬ್, ಸದಾನಂದ ಕದಂ ಅವರಿಗೆ ಎಸ್‌ಡಿಓ ದೇಶಪಾಂಡೆ ಸಹಕಾರ ನೀಡಿದ್ದಾರೆ. ಎಸ್‌ಡಿಓ ಅವರ ನೆರವಿನಿಂದ ಜಮೀನನ್ನು ಕೃಷಿ ಉದ್ದೇಶದಿಂದ, ಕೃಷಿಯೇತರ ಉದ್ದೇಶಕ್ಕಾಗಿ ಪರಿವರ್ತಿಸಲು ಅಕ್ರಮವಾಗಿ ಅನುಮತಿ ಪಡೆದು ರೆಸಾರ್ಟ್ ನಿರ್ಮಿಸಿರುವುದು ಬೆಳಕಿಗೆ ಬಂದಿದೆ ಎಂದು ತಿಳಿದಿದೆ. ಈ ಮೂಲಕ ಕರಾವಳಿ ನಿಯಂತ್ರಣ ವಲಯ (ಸಿಆರ್ಜೆಡ್) ನಿಯಮಗಳ ಉಲ್ಲಂಘನೆ ಮಾಡಲಾಗಿದೆ. ಅಭಿವೃದ್ಧಿ ರಹಿತ ವಲಯದ ಅಡಿಯಲ್ಲಿ ಬರುವ ಜಮೀನಿನಲ್ಲಿ ಐಷಾರಾಮಿ ಬಂಗಲೆಗಳನ್ನು ನಿರ್ಮಿಸಲು ರಾಜ್ಯ ಸರ್ಕಾರದ ಕಂದಾಯ ಇಲಾಖೆಯೊಂದಿಗೆ ಅಕ್ರಮವಾಗಿ ಅನುಮತಿ ಪಡೆಯಲಾಗಿದೆ ಎಂದು ಇಡಿ ತಿಳಿಸಿದೆ.
ಇದನ್ನೂ ಓದಿ:ಕೊಳವೆ ಬಾವಿಗೆ ಬಿದ್ದ 5 ವರ್ಷದ ಮಗು; ಫಲ ನೀಡದ 8 ಗಂಟೆಗಳ ಕಾರ್ಯಾಚರಣೆ