ಮುಂಬೈ( ಮಹಾರಾಷ್ಟ್ರ):ಸರ್ಕಾರಿ ಕಚೇರಿಯಲ್ಲಿನ ಅವ್ಯವಸ್ಥೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ತಾತ್ಸಾರದಿಂದ ವಿಕಲಚೇತನ ಮಹಿಳೆಯೊಬ್ಬರು ಕಷ್ಟಕ್ಕೆ ಒಳಗಾಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಎರಡು ಕಾಲಿಲ್ಲದ ಮಹಿಳೆ ವೀಲ್ಚೇರ್ ಸಹಾಯದಿಂದ ಮದುವೆ ನೋಂದಣಿಗೆ ರಿಜಿಸ್ಟ್ರಾರ್ ಕಚೇರಿಗೆ ಆಗಮಿಸಿದ್ದಾರೆ. ಈ ವೇಳೆ ಲಿಫ್ಟ್ ಕೂಡ ಕಾರ್ಯ ನಿರ್ವಹಣೆ ಮಾಡುತ್ತಿರಲಿಲ್ಲ. ಜೊತೆಗೆ ಮದುವೆ ದಾಖಲಾತಿ ಪತ್ರಕ್ಕೆ ಸಹಿ ಪಡೆಯಲು ಅಧಿಕಾರಿಗಳು ಕೂಡ ಕೆಳಗೆ ಬಾರದೇ ಕಡೆಗೆ ಅವರನ್ನು ಕುಟುಂಬಸ್ಥರು ಮೇಲೆತ್ತಿಕೊಂಡು ಹೋಗಿರುವ ಘಟನೆ ನಡೆದಿದೆ.
ಘಟನೆ ಕುರಿತು ಸಾಮಾಜಿಕ ಜಾಲತಾಣದ ಎಕ್ಸ್ನಲ್ಲಿ ಮಧುಮಗಳು ವಿರಾಲಿ ಮೋದಿ, ಸರ್ಕಾರಿ ಕಚೇರಿಯಲ್ಲಿ ನಡೆಸಿಕೊಂಡಿರುವ ಅಮಾನವೀಯತೆ ಕುರಿತು ಅಸಮಾಧಾನ ಹೊರ ಹಾಕಿದ್ದಾರೆ. ಅಕ್ಟೋಬರ್ 16ರಂದು ಮುಂಬೈನ ಉಪನಗರದಲ್ಲಿರುವ ಖಾರ್ನಲ್ಲಿರುವ ಮದುವೆ ನೋಂದಣಿ ಕಚೇರಿಗೆ ತೆರಳಿದ್ದೆವು. ಕಚೇರಿಯು ಎರಡನೇ ಮಹಡಿಯಲ್ಲಿದ್ದು, ಅಲ್ಲಿ ಲಿಫ್ಟ್ ಕೂಡ ಕಾರ್ಯಾಚರಣೆ ನಡೆಸುತ್ತಿರಲಿಲ್ಲ. ಅಧಿಕಾರಿಗಳು ಕೂಡ ಮದುವೆ ದಾಖಲಾತಿ ಸಹಿಯನ್ನು ನನ್ನಿಂದ ಪಡೆಯಲು ಕೆಳಗೆ ಬರಲು ಸಿದ್ದರಿರಲಿಲ್ಲ. ಕಡೆಗೆ ಎರಡು ಮೆಟ್ಟಿಲುಗಳು ಹತ್ತಿ ಮೇಲೆ ಹೋಗುವ ಸಂದರ್ಭ ಎದುರಾಯಿತು.
ಮೆಟ್ಟಿಲುಗಳು ಕಡಿದಾಗಿದ್ದು, ಬೇಲಿಗಳು ಕೂಡ ಸಡಿಲವಾಗಿದ್ದು, ತುಕ್ಕು ಹಿಡಿದಿದ್ದವು. ನಾನು ವಿಕಲಚೇತನೆ ಎಂಬ ಮಾಹಿತಿಯನ್ನು ನನ್ನ ಏಜೆಂಟ್ಗಳಿಗೂ ಕೂಡ ಮುಂಚೆಯೇ ನೀಡಿದ್ದೆ. ಯಾರು ಕೂಡ ನನ್ನ ಸಹಾಯಕ್ಕೆ ಬರಲಿಲ್ಲ. ಯಾವುದೇ ವ್ಯವಸ್ಥೆಯನ್ನೂ ಕೂಡ ನೀಡಲಿಲ್ಲ ಎಂದಿರುವ ಅವರು ಮಹಾರಾಷ್ಟ್ರ ಮತ್ತು ಕೇಂದ್ರ ಸರ್ಕಾರದ ಆಕ್ಸೆಸಿಬಲ್ ಇಂಡಿಯಾ ಅಭಿಯಾನ ಏನಾಯಿತು ಎಂದು ಇದೇ ವೇಳೆ ಪ್ರಶ್ನಿಸಿದ್ದಾರೆ.