ಮುಂಬೈ(ಮಹಾರಾಷ್ಟ್ರ): ಕಳೆದ ಕೆಲ ದಿನಗಳ ಹಿಂದೆ ಬಿಜೆಪಿ ಜೊತೆ ಮೈತ್ರಿಮಾಡಿಕೊಂಡು ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂದೆ ಸರ್ಕಾರ ರಚನೆ ಮಾಡಿದ್ದಾರೆ. ಇದೀಗ ಸಚಿವ ಸಂಪುಟದಲ್ಲಿ ಬಿಜೆಪಿಯ 25 ಹಾಗೂ ಶಿವಸೇನೆಯ 13 ಶಾಸಕರು ಮಂತ್ರಿ ಸ್ಥಾನ ಪಡೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಒಟ್ಟು 45 ಸಚಿವ ಸಂಪುಟದೊಂದಿಗೆ ಸಿಎಂ ಶಿಂದೆ ಕೆಲಸ ಮಾಡುವ ಇರಾದೆ ಇದ್ದು, ಉಳಿದಂತೆ ಪಕ್ಷೇತರ ಶಾಸಕರು ಸಚಿವರಾಗಿ ಕಾರ್ಯನಿರ್ವಹಿಸಲಿದ್ದಾರೆಂದು ತಿಳಿದು ಬಂದಿದೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ, ಮುಖ್ಯಮಂತ್ರಿ ಏಕನಾಥ್ ಶಿಂದೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೊರತುಪಡಿಸಿ ಹೊಸ ಮುಖಗಳಿಗೆ ಮಣೆ ಹಾಕಲು ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗ್ತಿದೆ. 2024ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲು ಮೈತ್ರಿ ಸರ್ಕಾರ ನಿರ್ಧಾರ ಕೈಗೊಂಡಿದೆ ಎಂಬ ಮಾಹಿತಿ ಇದೆ.
ಇದನ್ನೂ ಓದಿರಿ:ಯುಕೆ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಲಿರುವ ಬೋರಿಸ್ ಜಾನ್ಸನ್.. ಅಕ್ಟೋಬರ್ವರೆಗೂ ಉಸ್ತುವಾರಿ
ಶಿವಸೇನೆಯ ಬಂಡಾಯ 16 ಶಾಸಕರ ಅನರ್ಹತೆ ಪ್ರಶ್ನೆ ಮಾಡಿ ಶಿವಸೇನೆ ಈಗಾಗಲೇ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಅದರ ವಿಚಾರಣೆ ಜುಲೈ 11ರಂದು ನಡೆಯಲಿದೆ. ಹೀಗಾಗಿ, ಮಹಾರಾಷ್ಟ್ರ ಸಚಿವ ಸಂಪುಟ ರಚನೆಗೆ ಸದ್ಯ ತಡೆ ನೀಡಲಾಗಿದೆ. ಸುಪ್ರೀಂಕೋರ್ಟ್ನಿಂದ ಆದೇಶ ಹೊರಬೀಳುತ್ತಿದ್ದಂತೆ ಶಾಸಕರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ದಟ್ಟವಾಗಿದೆ.
2019ರಲ್ಲಿ ನಡೆದ ವಿಧಾನಸಭೆ ಚುನಾವಣೆ ನಂತರ ಶಿವಸೇನೆ+ಎನ್ಸಿಪಿ+ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿದ್ದವು. ಆದರೆ, ಕಳೆದ ಕೆಲ ದಿನಗಳ ಹಿಂದೆ ಶಿವಸೇನೆಯ ಏಕನಾಥ್ ಶಿಂಧೆ 48 ಶಾಸಕರೊಂದಿಗೆ ಬಂಡಾಯ ಎದ್ದಿದ್ದರು. ಹೀಗಾಗಿ, ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಬಿಜೆಪಿ ಜೊತೆ ಸೇರಿ ಬಂಡಾಯ ಶಿವಸೇನೆ ಸರ್ಕಾರ ರಚನೆ ಮಾಡಿದೆ.