ನವದೆಹಲಿ: ಮತ್ತೆ ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ಒಂದಾಗುತ್ತವೆಯೇ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಂದು ಅನುಮಾನ ಆರಂಭವಾಗಿದೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಬಿಜೆಪಿಯ ನಾಯಕರೊಬ್ಬರನ್ನು 'ಭವಿಷ್ಯದ ಸಹೋದ್ಯೋಗಿ' ಎಂದಿರುವುದು ಸಾಕಷ್ಟು ಸಂಚಲನ ಮೂಡಿಸಿದೆ.
ನಮ್ಮಲ್ಲಿ ಕಲ್ಯಾಣ ಕರ್ನಾಟಕ ಭಾಗ ಹೈದರಾಬಾದ್ ನಿಜಾಮನ ಆಡಳಿತದಿಂದ ವಿಮೋಚನೆಗೊಂಡಂತೆ, ಮಹಾರಾಷ್ಟ್ರದ ಮರಾಠವಾಡ ಪ್ರದೇಶವೂ ಕೂಡಾ ಹೈದರಾಬಾದ್ ನಿಜಾಮನಿಂದ ವಿಮೋಚನೆಗೊಂಡಿತ್ತು. ಇದರ ಸವಿನೆನಪಿಗಾಗಿ ಔರಂಗಾಬಾದ್ನಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅದೇ ಕಾರ್ಯಕ್ರಮದಲ್ಲಿ ಭಾಗಿಯಾಗಿ ವೇದಿಕೆ ಹಂಚಿಕೊಂಡಿದ್ದ ಬಿಜೆಪಿ ನಾಯಕ ಮತ್ತು ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ರಾವ್ಸಾಹೇಬ್ ದಾನ್ವೆ ಅವರನ್ನು ನೋಡಿ, 'ನಾವು ಮತ್ತೆ ಮೈತ್ರಿ ಮಾಡಿಕೊಂಡರೆ, ಇವರು ಭವಿಷ್ಯದ ಸಹೋದ್ಯೋಗಿ' ಎಂದಿದ್ದಾರೆ.