ಪುಣೆ (ಮಹಾರಾಷ್ಟ್ರ):ಧಾರ್ಮಿಕ ಕೇಂದ್ರದಲ್ಲಿ ಪ್ರಾರ್ಥನೆ ಸಲ್ಲಿಸುವ ಹೋದ ಅಪ್ರಾಪ್ತ ಬಾಲಕನೊಂದಿಗೆ ವ್ಯಕ್ತಿಯೊಬ್ಬ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ ಗಂಭೀರ ಆರೋಪ ಪ್ರಕರಣ ಮಹಾರಾಷ್ಟ್ರದ ಪುಣೆಯಲ್ಲಿ ಬೆಳಕಿಗೆ ಬಂದಿದೆ. ಈ ಕುರಿತು ಸಂತ್ರಸ್ತ ಬಾಲಕನ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದು, ಸದ್ಯ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಇಲ್ಲಿನ ಕೊಂಡ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನವೆಂಬರ್ 10ರಂದು ಹೀನ ಕೃತ್ಯ ನಡೆದಿದೆ. ಬಾಲಕನೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ ಆರೋಪಿಯನ್ನು ಮಹಮ್ಮದ್ ಯೂಸುಫ್ ಎಂದು ಗುರುತಿಸಲಾಗಿದೆ. ನವೆಂಬರ್ 15ರಂದು ಬಾಲಕನ ಸಂಬಂಧಿಕರು ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಆರೋಪಿ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ)ಯ ವಿವಿಧ ಸೆಕ್ಷನ್ಗಳ ಪ್ರಕಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ.
ನೀಚ ಕೃತ್ಯ ಬೆಳಕಿಗೆ ಬಂದಿದ್ದು ಹೇಗೆ?: ಇತ್ತೀಚೆಗೆ ಒಂಬತ್ತು ವರ್ಷದ ಬಾಲಕ ಮನೆಗೆ ಸೋದರ ಸಂಬಂಧಿ ಮಹಿಳೆಯೊಬ್ಬರು ಹೋಗಿದ್ದರು. ಈ ವೇಳೆ, ಬಾಲಕ ಪ್ರಾರ್ಥನೆಗೆ ತೆರಳದೇ ಇರುವುದನ್ನು ಆಕೆ ಗಮನಿಸಿದ್ದರು. ಅಂತೆಯೇ, ಕೆಲ ದಿನಗಳಿಂದ ಏಕೆ ಪ್ರಾರ್ಥನೆ ಮಾಡಲು ಹೋಗುತ್ತಿಲ್ಲ ಎಂದು ಬಾಲಕನನ್ನು ಆಕೆ ಕೇಳಿದ್ದರು. ಆಗ ಧಾರ್ಮಿಕ ಕೇಂದ್ರದಲ್ಲಿ ತನ್ನೊಂದಿಗೆ ನಡೆದ ಕೃತ್ಯವನ್ನು ಬಾಲಕ ಬಹಿರಂಗ ಪಡಿಸಿದ್ದಾನೆ.