ಮುಂಬೈ: ಮಹಾರಾಷ್ಟ್ರದಲ್ಲಿ ಮಹಾಮಾರಿ ಕೊರೊನಾ ವೈರಸ್ ಕೈಮೀರಿ ಹೋಗಿದ್ದು, ನಿತ್ಯ ಸಾವಿರಾರು ಕೋವಿಡ್ ಪ್ರಕರಣ ದಾಖಲಾಗುತ್ತಿದ್ದು, ನೂರಾರು ಜನರು ಡೆಡ್ಲಿ ವೈರಸ್ಗೆ ಬಲಿಯಾಗುತ್ತಿದ್ದಾರೆ.
ಇದೇ ವಿಚಾರವಾಗಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಇಂದು ರಾತ್ರಿ 8:30ಕ್ಕೆ ಮಹಾರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದು, ಕಠಿಣ ಲಾಕ್ಡೌನ್ ಘೋಷಣೆ ಮಾಡುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಕಠಿಣ ಲಾಕ್ಡೌನ್ ಬಿಟ್ಟು ಬೇರೆ ಆಯ್ಕೆ ಉಳಿದಿಲ್ಲ: ಸರ್ವಪಕ್ಷ ಸಭೆಯಲ್ಲಿ ಸಿಎಂ ಉದ್ಧವ್ ಠಾಕ್ರೆ ಅಭಿಮತ
ಈಗಾಗಲೇ ಏಪ್ರಿಲ್ 10ರಂದು ಸರ್ವಪಕ್ಷ ಸಭೆ ಕರೆದಿದ್ದ ಉದ್ಧವ್ ಠಾಕ್ರೆ, ಕೊರೊನಾ ನಿಯಂತ್ರಣಕ್ಕೆ ತರಬೇಕಾದರೆ ಲಾಕ್ಡೌನ್ ಹೇರಿಕೆ ಬಿಟ್ಟು ಬೇರೆ ಹಾದಿ ಇಲ್ಲ ಎಂಬ ಇಂಗಿತ ಹೊರಹಾಕಿದ್ದರು. ಇದೇ ವಿಚಾರವಾಗಿ ಇಂದು ಭಾಷಣ ಮಾಡಿ, ಆದೇಶ ಹೊರಹಾಕುವ ಸಾಧ್ಯತೆ ಇದೆ.
ಮಹಾರಾಷ್ಟ್ರದಲ್ಲಿ ಕಳೆದ ಕೆಲ ವಾರಗಳಿಂದ ಪ್ರತಿದಿನ 50 ಸಾವಿರಕ್ಕೂ ಅಧಿಕ ಕೋವಿಡ್ ಪ್ರಕರಣ ದಾಖಲಾಗುತ್ತಿದ್ದು, ಸದ್ಯ 5.64 ಲಕ್ಷ ಸಕ್ರಿಯ ಪ್ರಕರಣಗಳಿವೆ. ಜತೆಗೆ ಇಲ್ಲಿಯವರೆಗೆ 58,245 ಜನರು ಸಾವನ್ನಪ್ಪಿದ್ದಾರೆ.
ಮಹಾರಾಷ್ಟ್ರ ತೊರೆಯುತ್ತಿರುವ ಕೂಲಿ ಕಾರ್ಮಿಕರು!
ಮಹಾರಾಷ್ಟ್ರದಲ್ಲಿ ಕಠಿಣ ಲಾಕ್ಡೌನ್ ಜಾರಿಗೊಳ್ಳುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗುತ್ತಿದ್ದಂತೆ ಸಾವಿರಾರು ಕೂಲಿ ಕಾರ್ಮಿಕರು ಅಲ್ಲಿಂದ ತವರಿನತ್ತ ಮುಖ ಮಾಡಿದ್ದಾರೆ. ವಿವಿಧ ರೈಲ್ವೆ ನಿಲ್ದಾಣಗಳಲ್ಲಿ ಸಾವಿರಾರು ಜನರು ರೈಲುಗಳಿಗಾಗಿ ಕಾಯುತ್ತಿರುವ ದೃಶ್ಯ ಸರ್ವೆ ಸಾಮಾನ್ಯವಾಗಿ ಕಂಡು ಬಂದಿದೆ.