ಮುಂಬೈ (ಮಹಾರಾಷ್ಟ್ರ):ನವಿ ಮುಂಬೈನ ಖಾರ್ಘರ್‌ನಲ್ಲಿ ನಡೆದ 'ಮಹಾರಾಷ್ಟ್ರ ಭೂಷಣ್ ಪ್ರಶಸ್ತಿ'ಪ್ರದಾನ ಸಮಾರಂಭದ ವೇಳೆ ಬಿಸಿಲಿನ ತಾಪದಿಂದ ಒಟ್ಟು 11 ಜನರು ಸಾವನ್ನಪ್ಪಿದ್ದು, 600ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಕಚೇರಿ ಭಾನುವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ. ಘಟನೆಯ ನಂತರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮೃತರಿಗೆ 5 ಲಕ್ಷ ರೂ.ಪರಿಹಾರ ಘೋಷಿಸಿದ್ದಾರೆ. ಅಲ್ಲದೇ ಚಿಕಿತ್ಸೆ ಪಡೆಯುತ್ತಿರುವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದ್ದಾರೆ.
ಮಹಾರಾಷ್ಟ್ರ ಸರ್ಕಾರ ನಾಗರಿಕರ ಸಮಾಜ ಸೇವೆ ಪರಿಗಣಿಸಿ ಮಹಾರಾಷ್ಟ್ರ ಭೂಷಣ್ ಪ್ರಶಸ್ತಿಯನ್ನು ನೀಡುತ್ತದೆ. ಅದರಂತೆ ಸಾಮಾಜಿಕ ಕಾರ್ಯಕರ್ತ ದತ್ತಾತ್ರೇಯ ನಾರಾಯಣ್ ಯಾನೆ ಅಪ್ಪಾಸಾಹೇಬ್ ಧರ್ಮಾಧಿಕಾರಿ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಮುಖ್ಯಮಂತ್ರಿ ಏಕನಾಥ್ ಶಿಂಧೆ ಹಾಗೂ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಕೂಡ ಸಮಾರಂಭದಲ್ಲಿ ಭಾಗಿಯಾಗಿದ್ದರು. ಹೀಗೆ ಕಾರ್ಯಕ್ರಮ ನಡೆಯುವಾಗಲೇ ಸುಡುವ ಬಿಸಿಲಿನಿಂದಾಗಿ ದುರಂತ ನಡೆದಿದೆ.
ನವಿ ಮುಂಬೈನ ಬೃಹತ್ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಟೆಂಟ್ ಹಾಕದ ಕಾರಣ ಸಾವಿರಾರು ಜನ ಬಿಸಿಲಿನಲ್ಲಿಯೇ ಕುಳಿತು ಕಾರ್ಯಕ್ರಮ ವೀಕ್ಷಿಸಬೇಕಾಯಿತು. ಅದರಲ್ಲೂ, ದತ್ತಾತ್ರೇಯ ನಾರಾಯಣ್ ಅವರ ಸಾವಿರಾರು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬೆಳಗ್ಗೆ 11.30ಕ್ಕೆ ಆರಂಭವಾದ ಕಾರ್ಯಕ್ರಮ ಮಧ್ಯಾಹ್ನ 1 ಗಂಟೆಯವರೆಗೂ ನಡೆಯಿತು. ಹಾಗಾಗಿ 38 ಡಿಗ್ರಿ ಸೆಲ್ಸಿಯಸ್ ತಾಪಮಾನವು ಜನರನ್ನು ಬಸವಳಿಯುವಂತೆ ಮಾಡಿದೆ. ಆಯಾಸ ಹಾಗೂ ನಿರ್ಜಲೀಕರಣದಿಂದ ಜನ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ.
5 ಲಕ್ಷ ರೂ.ಪರಿಹಾರ ಘೋಷಣೆ:ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ನಡೆದ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಮಹಾರಾಷ್ಟ್ರ ಸರ್ಕಾರ ತಲಾ 5 ಲಕ್ಷ ರೂಪಾಯಿ ಘೋಷಿಸಿದೆ. ಅಸ್ವಸ್ಥರಾದ ನೂರಾರು ಜನರನ್ನು ನವಿ ಮುಂಬೈನ ಕಮೋಥೆಯಲ್ಲಿರುವ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ದುರಂತ ಸಂಭವಿಸಿದ ಹಿನ್ನೆಲೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಆಸ್ಪತ್ರೆಗೆ ಭೇಟಿ ನೀಡಿ ಜನರ ಆರೋಗ್ಯ ವಿಚಾರಿಸಿದ್ದಾರೆ. ಚಿಕಿತ್ಸೆಗೆ ಸರ್ಕಾರದಿಂದ ಎಲ್ಲ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.