ಮುಂಬೈ:ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ನೆರೆಯ ರಾಯಗಢ ಜಿಲ್ಲೆಯ ಪನ್ವೇಲ್‌ನಿಂದ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (Popular Front of India) ಗೆ ಸಂಬಂಧಿಸಿದ ನಾಲ್ವರು ಕಾರ್ಯಕರ್ತರನ್ನು ಬಂಧಿಸಿದೆ. ಬಂಧಿತರಲ್ಲಿ ನಿಷೇಧಿತ ಸಂಘಟನೆಯ ರಾಜ್ಯ ವಿಸ್ತರಣಾ ಸಮಿತಿ ಸ್ಥಳೀಯ ಸದಸ್ಯರು, ಸ್ಥಳೀಯ ಘಟಕದ ಕಾರ್ಯದರ್ಶಿ, ಇತರ ಇಬ್ಬರು ಕಾರ್ಯಕರ್ತರು ಇರುವುದು ಖಚಿತವಾಗಿದೆ.
ಭಾರತ ಸರ್ಕಾರವು ಪಿಎಫ್‌ಐ ಮೇಲೆ ನಿಷೇಧ ಇದ್ದರೂ ಪನ್ವೇಲ್‌ನಲ್ಲಿ ಸಂಘಟನೆಯ ಇಬ್ಬರು ಪದಾಧಿಕಾರಿಗಳು ಕೆಲವು ಕಾರ್ಯಕರ್ತರನ್ನು ಭೇಟಿಯಾಗಿರುವ ಕುರಿತು ಈ ಮೊದಲು ಎಟಿಎಸ್‌ಗೆ ರಹಸ್ಯ ಮಾಹಿತಿ ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾಹಿತಿ ಆಧರಿಸಿ, ಎಟಿಎಸ್ ತಂಡವು ಮುಂಬೈನಿಂದ ಸುಮಾರು 50 ಕಿ.ಮೀ ದೂರದ ರಾಯಗಢ ಜಿಲ್ಲೆಯ ಪನ್ವೇಲ್‌ನಲ್ಲಿ ಶೋಧ ನಡೆಸಿ ನಾಲ್ವರು ಪಿಎಫ್‌ಐ ಕಾರ್ಯಕರ್ತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. ವಿಚಾರಣೆ ಮುಗಿದ ಬಳಿಕ , ಮುಂಬಯಿನ ಎಟಿಎಸ್‌ನ ಕಲಾ ಚೌಕಿ ಘಟಕದಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆಯ ಸೆಕ್ಷನ್ 10 ರ ಅಡಿ ನಾಲ್ವರನ್ನು ಬಂಧಿಸಲಾಗಿದೆ. ಇನ್ನೂ ಹೆಚ್ಚಿನ ತನಿಖೆ ನಡೆಯಲಿದೆ ಎಂದು ಎಟಿಎಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.