ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಅಧಿವೇಶನ ಇಂದು ಹಾಗೂ ನಾಳೆ ನಡೆಯಲಿದೆ. ಇಂದು ಸ್ಪೀಕರ್ ಆಯ್ಕೆ ನಡೆಯಲಿದ್ದು ಹಾಗೂ ಸೋಮವಾರ ನೂತನ ಸರ್ಕಾರದ ವಿಶ್ವಾಸ ಮತಯಾಚನೆ ಪ್ರಕ್ರಿಯೆ ನಡೆಯಲಿದೆ.
ವಿಧಾನಸಭೆ ಕಲಾಪ ಬೆಳಗ್ಗೆ 11 ಗಂಟೆಗೆ ಆರಂಭವಾಗಿದೆ. ಬಿಜೆಪಿಯು ಶಾಸಕ ರಾಹುಲ್ ನಾರ್ವೇಕರ್ ಅವರನ್ನು ಸ್ಪೀಕರ್ ಹುದ್ದೆಗೆ ಅಖಾಡಕ್ಕಿಳಿಸಿದ್ದು, ಬಹುತೇಕ ಆಯ್ಕೆಯಾಗಲಿದ್ದಾರೆ. ಇನ್ನು, ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಶಿವಸೇನಾ ಶಾಸಕ ಮತ್ತು ಉದ್ಧವ್ ಠಾಕ್ರೆ ಆಪ್ತ ರಾಜನ್ ಸಾಲ್ವಿ ಅಖಾಡದಲ್ಲಿದ್ದಾರೆ.
288 ಸದಸ್ಯ ಬಲದ ವಿಧಾನಸಭೆಯಲ್ಲಿ ಬಂಡಾಯ ಶಿವಸೇನೆಯ ಶಾಸಕರು ಹಾಗೂ ಬಿಜೆಪಿ ಸೇರಿದಂತೆ 156 ಶಾಸಕರ ಬೆಂಬಲ ಸಿಎಂ ಏಕನಾಥ್ ಶಿಂಧೆಗಿದ್ದು, ನಾಳೆ ನಡೆಯುವ ವಿಶ್ವಾಸಮತ ಅಗ್ನಿಪರೀಕ್ಷೆಯನ್ನು ಸುಲಭವಾಗಿ ಜಯಿಸಲಿದ್ದಾರೆ.
ವಿಧಾನಸಭೆಯಲ್ಲಿ ಪಕ್ಷಗಳ ಬಲಾಬಲ ಇಂತಿದೆ: ಶಿವಸೇನೆ 55, ಎನ್‌ಸಿಪಿ 53, ಕಾಂಗ್ರೆಸ್ 44, ಬಿಜೆಪಿ 106, ಬಹುಜನ ವಿಕಾಸ್ ಅಘಾಡಿ 3, ಸಮಾಜವಾದಿ ಪಕ್ಷ 2, ಎಐಎಂಐಎಂ 2, ಪ್ರಹಾರ್ ಜನಶಕ್ತಿ ಪಕ್ಷ 2, ಎಂಎನ್‌ಎಸ್ 1, ಸಿಪಿಐ (ಎಂ) 1, ಪಿಡಬ್ಲ್ಯೂಪಿ 1, ಸ್ವಾಭಿಮಾನಿ ಪಕ್ಷ 1, ರಾಷ್ಟ್ರೀಯ ಸಮಾಜ ಪಕ್ಷ 1, ಜನಸುರಾಜ್ಯ ಶಕ್ತಿ ಪಕ್ಷ 1, ಕ್ರಾಂತಿಕಾರಿ ಶೆಟ್ಕರಿ ಪಕ್ಷ 1 ಮತ್ತು ಸ್ವತಂತ್ರರು 13 ಮಂದಿ ಇದ್ದಾರೆ. ಕಳೆದ ತಿಂಗಳು ಶಿವಸೇನೆ ಶಾಸಕ ರಮೇಶ್ ಲಟ್ಕೆ ನಿಧನರಾದ ಕಾರಣ ಒಂದು ಸ್ಥಾನ ಖಾಲಿ ಇದೆ.
ಇದನ್ನೂ ಓದಿ:ಉದ್ದವ್ ಆಟ ಶುರು: ಶಿವಸೇನಾ ನಾಯಕನ ಸ್ಥಾನದಿಂದ ಶಿಂಧೆ ವಜಾಗೊಳಿಸಿದ ಠಾಕ್ರೆ!