ಪ್ರಯಾಗರಾಜ್ (ಉತ್ತರಪ್ರದೇಶ): 2025ರಲ್ಲಿ ನಡೆಯಲಿರುವ ಬೃಹತ್ ಧಾರ್ಮಿಕ ಕಾರ್ಯಕ್ರಮ ಮಹಾಕುಂಭಮೇಳದಲ್ಲಿ ಭಾಗವಹಿಸಲು ಬಯಸುವ ಭಕ್ತರಿಗೆ ಅನುಕೂಲವಾಗುವಂತೆ ಭಾರತೀಯ ರೈಲ್ವೇ ದೇಶದ ವಿವಿಧ ಭಾಗಗಳಿಂದ 1,200 ವಿಶೇಷ ರೈಲುಗಳನ್ನು ಓಡಿಸಲಿದೆ. ಕಾರ್ಯಕ್ರಮಕ್ಕೆ ಸುಮಾರು 40 ಕೋಟಿ ಭಕ್ತರು ಪ್ರಯಾಗ್‌ರಾಜ್‌ಗೆ ಆಗಮಿಸುವ ನಿರೀಕ್ಷೆಯಿದೆ. 2019ರ ಕುಂಭದಲ್ಲಿ 24 ಕೋಟಿಗೂ ಹೆಚ್ಚು ಜನ ಪಾಲ್ಗೊಂಡಿದ್ದರು.
ಪ್ರಯಾಣಿಕರ ಅನುಕೂಲಕ್ಕಾಗಿ ನಗರದಲ್ಲಿ 19 ರೈಲು ಮೇಲ್ಸೇತುವೆಗಳು ಮತ್ತು ರೈಲು ಕೆಳಸೇತುವೆಗಳ ನಿರ್ಮಾಣಕ್ಕಾಗಿ 837 ಕೋಟಿ ರೂ. ಅನುದಾನಕ್ಕೆ ರೈಲ್ವೆ ಇಲಾಖೆ ಅನುಮೋದನೆ ನೀಡಿದೆ. 19 ಮೇಲ್ಸೇತುವೆಗಳು ಮತ್ತು ಕೆಳಸೇತುವೆಗಳ ಪೈಕಿ ನಾಲ್ಕರಲ್ಲಿ ಕೆಲಸವು ಬಹುತೇಕ ಮುಗಿದಿದೆ ಮತ್ತು ಈ ತಿಂಗಳಲ್ಲೇ ಇವು ಕಾರ್ಯಾರಂಭ ಮಾಡಲಿವೆ. ಏಳರಲ್ಲಿ ಕಾಮಗಾರಿ ನಡೆಯುತ್ತಿದ್ದು, ಎಂಟು ಕಾಮಗಾರಿಗಳು ಆರಂಭವಾಗಬೇಕಿವೆ.
ಮಹಾಕುಂಭ ಮೇಳಕ್ಕಾಗಿ ರೈಲ್ವೆ ಇಲಾಖೆ ಮಾಡಿಕೊಳ್ಳುತ್ತಿರುವ ಸಿದ್ಧತೆಗಳ ಬಗ್ಗೆ ಉತ್ತರ ಮಧ್ಯ ರೈಲ್ವೆಯ (ಎನ್‌ಸಿಆರ್) ಪ್ರಯಾಗ್‌ರಾಜ್ ವಿಭಾಗದ ಡಿವಿಜನಲ್ ರೈಲ್ವೇ ಮ್ಯಾನೇಜರ್ (ಡಿಆರ್‌ಎಂ) ಹಿಮಾಂಶು ಬಡೋನಿ ಮಾಹಿತಿ ನೀಡಿದರು. 2019 ರ ಕುಂಭದಲ್ಲಿ ಎಂಟು ಬೋಗಿಗಳನ್ನು ಹೊಂದಿರುವ 800 ರೈಲುಗಳನ್ನು ಓಡಿಸಲಾಗಿತ್ತು. ಈ ಬಾರಿ ಪ್ರತಿ ರೈಲು 16 ಬೋಗಿಗಳನ್ನು ಹೊಂದಿರುತ್ತದೆ ಮತ್ತು ರೈಲುಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಅಗತ್ಯವಿದ್ದರೆ ಅದನ್ನು ಇನ್ನಷ್ಟು ಹೆಚ್ಚಿಸಬಹುದು ಎಂದು ಅವರು ಹೇಳಿದರು.