ನವದೆಹಲಿ:ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಮಹಾಭಾರತ ಧಾರಾವಾಹಿಯಲ್ಲಿ ಭೀಮನ ಪಾತ್ರದಲ್ಲಿ ನಟಿಸಿದ್ದ ಹಾಗೂ ಏಷ್ಯನ್ ಗೇಮ್ಸ್ ಚಿನ್ನದ ಪದಕ ಗೆದ್ದು ಖ್ಯಾತಿ ಪಡೆದಿದ್ದ ನಟ ಮತ್ತು ಕ್ರೀಡಾಪಟು ಪ್ರವೀಣ್ ಕುಮಾರ್ ಸೋಬ್ತಿ (74) ಸೋಮವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ನವದೆಹಲಿಯ ಅಶೋಕ್ ವಿಹಾರ್ ನಿವಾಸದಲ್ಲಿ ಪ್ರವೀಣ್ ಕುಮಾರ್ ಸೋಬ್ತಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ ದೀರ್ಘಕಾಲದ ಎದೆ ಸೋಂಕಿನ ಸಮಸ್ಯೆ ಇತ್ತು. ರಾತ್ರಿಯಲ್ಲಿ ಅವರಿಗೆ ಎದೆನೋವು ಕಾಣಿಸಿಕೊಂಡಾಗ, ವೈದ್ಯರನ್ನು ಕರೆದಿದ್ದೆವು. ಆದರೆ ಹೃದಯಾಘಾತದ ಕಾರಣದಿಂದಾಗಿ ರಾತ್ರಿ 10 ಗಂಟೆ ವೇಳೆಗೆ ಅವರು ನಿಧನರಾಗಿದ್ದಾರೆ ಎಂದು ಪ್ರವೀಣ್ ಅವರ ಸಂಬಂಧಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪ್ರವೀಣ್ ಕುಮಾರ್ ಸೋಬ್ತಿ ಹ್ಯಾಮರ್ ಮತ್ತು ಡಿಸ್ಕಸ್ ಥ್ರೋನಲ್ಲಿ ವಿವಿಧ ಅಥ್ಲೆಟಿಕ್ ಈವೆಂಟ್‌ಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದರು. 1966 ಮತ್ತು 1970ರಲ್ಲಿ ಎರಡು ಚಿನ್ನದ ಪದಕಗಳನ್ನು ಒಳಗೊಂಡಂತೆ ಏಷ್ಯನ್ ಗೇಮ್ಸ್‌ನಲ್ಲಿ ನಾಲ್ಕು ಪದಕಗಳನ್ನು ಅವರು ಗೆದ್ದಿದ್ದರು. ಅವರು 1966ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಅವರು ಹ್ಯಾಮರ್ ಥ್ರೋನಲ್ಲಿ ಬೆಳ್ಳಿ ಪದಕವನ್ನು ಭಾರತಕ್ಕೆ ತಂದು ಕೊಟ್ಟಿದ್ದರು.
ಇದನ್ನೂ ಓದಿ:ಸದ್ದಿಲ್ಲದೇ ಮುಹೂರ್ತ ಮುಗಿಸಿಕೊಂಡ ಮಂಸೋರೆ ಸಿನಿಮಾ '19.20.21'
ಅಥ್ಲೀಟ್ ನಂತರ ನಟನಾ ವೃತ್ತಿಯನ್ನು ಪ್ರಾರಂಭಿಸಿದ ಅವರು ಮತ್ತಷ್ಟು ಜನಪ್ರಿಯತೆಯನ್ನು ಗಳಿಸಿದ್ದರು. ಮಹಾಭಾರತ ಧಾರಾವಾಹಿಯಲ್ಲಿ ಭೀಮನ ಪಾತ್ರದಲ್ಲಿ ಮಿಂಚಿದ್ದ ಅವರು ಪತ್ನಿ, ಮಗಳು, ಇಬ್ಬರು ಕಿರಿಯ ಸಹೋದರರು ಮತ್ತು ಒಬ್ಬ ಸಹೋದರಿಯನ್ನು ಅಗಲಿದ್ದಾರೆ.