ಮುಂಬೈ (ಮಹಾರಾಷ್ಟ್ರ): 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು ಕಾಲೇಜುಗಳಿಗೆ ಪ್ರವೇಶ ಪಡೆಯಲು ಮತದಾರರ ನೋಂದಣಿ ಮಾಡುವುದನ್ನು ಮಹಾರಾಷ್ಟ್ರ ಸರ್ಕಾರವು ಕಡ್ಡಾಯಗೊಳಿಸಲಿದೆ ಎಂದು ಸಚಿವ ಚಂದ್ರಕಾಂತ್ ಪಾಟೀಲ್ ತಿಳಿಸಿದ್ದಾರೆ.
ಮುಂಬೈನ ರಾಜಭವನದಲ್ಲಿ ಗುರುವಾರ ನಡೆದ ಕೃಷಿಯೇತರ ವಿಶ್ವವಿದ್ಯಾಲಯಗಳ ಉಪಕುಲಪತಿಗಳ ಸಭೆಯಲ್ಲಿ ಮಾತನಾಡಿದ ರಾಜ್ಯ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಚಿವ ಚಂದ್ರಕಾಂತ್ ಪಾಟೀಲ್, ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯಡಿ 2023ರ ಜೂನ್‌ನಿಂದ ಸರ್ಕಾರವು ನಾಲ್ಕು ವರ್ಷಗಳ ಪದವಿ ಕೋರ್ಸ್‌ಗಳನ್ನು ಪರಿಚಯಿಸಲಿದೆ. ಅಲ್ಲದೇ, ವಿಶ್ವವಿದ್ಯಾಲಯಗಳು ಕಡ್ಡಾಯವಾಗಿ ಎನ್‌ಇಪಿ ಜಾರಿಗೆ ತರಬೇಕಾಗುತ್ತದೆ ಎಂದು ಹೇಳಿದರು.
ಎನ್‌ಇಪಿ ಅಡಿ ಕಡ್ಡಾಯಗೊಳಿಸಿದ ನಾಲ್ಕು ವರ್ಷಗಳ ಪದವಿ ಕೋರ್ಸ್‌ಗಳನ್ನು ಮುಂದಿನ ಜೂನ್‌ನಿಂದ ಜಾರಿಗೆ ತರಬೇಕಾಗಿರುವುದರಿಂದ ವಿಶ್ವವಿದ್ಯಾಲಯಗಳ ಜವಾಬ್ದಾರಿಯಾಗಿದೆ. ಎನ್‌ಇಪಿ ಅನುಷ್ಠಾನದ ಕುರಿತು ಉಪಕುಲಪತಿಗಳ ಗೊಂದಲಗಳನ್ನು ಪರಿಹರಿಸಲು ಸರ್ಕಾರ ಶೀಘ್ರದಲ್ಲೇ ನಿವೃತ್ತ ಉಪಕುಲಪತಿಗಳ ಸಮಿತಿಯನ್ನು ರಚಿಸಲಿದೆ ಎಂದು ಸಚಿವ ಪಾಟೀಲ್ ತಿಳಿಸಿದರು.