ಮುಂಬೈ (ಮಹಾರಾಷ್ಟ್ರ):ಮಹಾರಾಷ್ಟ್ರ ರಾಜಕೀಯಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಮೇ 20ರಂದೇ ಏಕನಾಥ ಶಿಂದೆ ಅವರಿಗೆ ಸಿಎಂ ಉದ್ದವ್ ಠಾಕ್ರೆ ಅವರು ಮುಖ್ಯಮಂತ್ರಿ ಪದವಿಯ ಆಫರ್ ನೀಡಿದ್ದರು. ಆದರೆ, ಇದಾದ ಸರಿಯಾಗಿ ಒಂದೇ ತಿಂಗಳಿಗೆ ಶಿಂದೆ ಬಂಡಾಯ ಎದ್ದಿದ್ದಾರೆ ಎಂಬ ಅಂಶ ಬಯಲಿಗೆ ಬಂದಿದೆ. ಇದನ್ನು ಖುದ್ದು ಠಾಕ್ರೆ ಮಗ, ಸಚಿವ ಆದಿತ್ಯ ಠಾಕ್ರೆ ಬಹಿರಂಗಪಡಿಸಿದ್ದಾರೆ.
ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಮಹಾ ವಿಕಾಸ್ ಆಘಾಡಿ ಸರ್ಕಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಏಕನಾಥ ಶಿಂದೆ ಬಂಡಾಯ ಸಾರಿದ್ದಾರೆ. ಇದರಿಂದ ಮಹಾರಾಷ್ಟ್ರ ರಾಜಕೀಯದಲ್ಲಿ ಅಲ್ಲೋಲ-ಕಲ್ಲೋಲ ಉಂಟಾಗಿರುವುದಲ್ಲದೇ ಸರ್ಕಾರವನ್ನೇ ಪತನದಂಚಿಗೆ ತಂದು ನಿಲ್ಲಿಸಿದೆ. ಅಷ್ಟೇ ಅಲ್ಲ, ಶಿವಸೇನೆಯಲ್ಲೇ ಎರಡು ಗಣಗಳಾಗಿ ಇಬ್ಭಾಗವಾಗುವ ಹಂತಕ್ಕೆ ತಲುಪಿದೆ.
ಶಿಂದೆಗೆ ದಿಗ್ಭ್ರಮೆ..ಇದರ ನಡುವೆ ಇದೀಗ ಆದಿತ್ಯ ಠಾಕ್ರೆ ಅಚ್ಚರಿಯ ಅಂಶ ಬಯಲಿಗೆ ಹಾಕಿದ್ದಾರೆ. ಉದ್ಧವ್ ಠಾಕ್ರೆ ತಮ್ಮ ಸಚಿವ ಸಂಪುಟದ ಸಹೋದ್ಯೋಗಿಯಾದ ಏಕನಾಥ ಶಿಂದೆ ಅವರಿಗೆ ಸಿಎಂ ಸ್ಥಾನದ ಆಫರ್ ನೀಡಿದ್ದರು. ಇದನ್ನು ಕೇಳಿಯೇ ಶಿಂಧೆ ದಿಗ್ಭ್ರಮೆಗೊಂಡಿದ್ದರು ಎಂದು ಜ್ಯೂನಿಯರ್ ಠಾಕ್ರೆ ಹೇಳಿದ್ದಾರೆ.
ಒಂದು ತಿಂಗಳಿಗೆ ಬಂಡಾಯ ಶುರು..ಅಲ್ಲದೇ, ನಂತರ ನುಣುಚಿಕೊಳ್ಳಲು ಶಿಂಧೆ ಆರಂಭಿಸಿದರು. ಸರಿಯಾದ ಪ್ರತಿಕ್ರಿಯೆಯನ್ನೂ ನೀಡಲಿಲ್ಲ. ಇದೇ ವೇಳೆ ಕೆಲವು ಗೊಂದಲಮಯ ಘಟನೆಗಳ ಬಗ್ಗೆ ಕೇಳಿದ್ದೆ. ಇದಾದ ಸರಿಯಾಗಿ ಒಂದು ತಿಂಗಳಿಗೆ ಜೂನ್ 20ರಂದು ಶಿಂದೆ ಮತ್ತು ಅವರ ಗುಂಪಿನ ಬಂಡಾಯ ಪ್ರಾರಂಭವಾಯಿತು ಎಂದೂ ಆದಿತ್ಯ ಠಾಕ್ರೆ ಆರೋಪಿಸಿದ್ದಾರೆ.