ಮುಂಬೈ: ಉದ್ಧವ್ ಠಾಕ್ರೆ ಸರ್ಕಾರವು ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಕಲ್ಯಾಣ ಕಚೇರಿ ಸ್ಥಾಪಿಸಬೇಕು. ಇದು ಮರಾಠಿ ಭಾಷೆ ಮಾತನಾಡುವ ಜನರ ಹಕ್ಕನ್ನು ರಕ್ಷಿಸುವ ಜತೆಗೆ, ಕರ್ನಾಟಕ ಸರ್ಕಾರದ ಜತೆ ಸಂಪರ್ಕ ಹೊಂದಲು ಸಹಾಯ ಮಾಡುತ್ತದೆ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.
'ಸಾಮ್ನಾ'ದಲ್ಲಿ ಸಾಪ್ತಾಹಿಕ ಕಾಲಂ 'ರೋಕ್ ಠೋಕ್'ನಲ್ಲಿ ಈ ಕಚೇರಿ ವಿಚಾರವನ್ನು ಅವರು ಪ್ರಸ್ತಾಪಿಸಿದ್ದಾರೆ. ಮರಾಠಿ ಮಾತನಾಡುವ ಜನರ ಕಲ್ಯಾಣಕ್ಕಾಗಿ ವಿವಾದಿತ ಗಡಿ ಪ್ರದೇಶಗಳಿಗೆ ಮಹಾರಾಷ್ಟ್ರ ಸಮನ್ವಯ ಸಚಿವರಾಗಿರುವ ಏಕನಾಥ್ ಶಿಂಧೆ ಆಗಾಗ್ಗೆ ಭೇಟಿ ನೀಡಬೇಕು ಎಂದು ಅವರು ಕೋರಿದ್ದಾರೆ.
ಇದನ್ನೂ ಓದಿ:ಪ್ರಧಾನಿ ಮೋದಿಗೆ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಪತ್ರ
ಈ ಹಿಂದಿನ ದೇವೇಂದ್ರ ಫಡ್ನವೀಸ್ ಆಡಳಿತದಲ್ಲಿ ಸಮನ್ವಯ ಸಚಿವರಾಗಿದ್ದ ಚಂದ್ರಕಾಂತ್ ಪಾಟೀಲ್ ಅವರು ವಿವಾದಿತ ಗಡಿ ಪ್ರದೇಶಗಳಿಗೆ ಎಂದಿಗೂ ಭೇಟಿ ನೀಡಿಲ್ಲ ಎಂದು ಅವರು ಟೀಕಿಸಿದ್ದಾರೆ.
ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಇರುವ ಗಡಿ ವಿವಾದ ಪ್ರಕರಣದಲ್ಲಿ ಮಹಾರಾಷ್ಟ್ರ ಸರ್ಕಾರ ಕರ್ನಾಟಕದ ವಿರುದ್ಧ ತನ್ನ ನಿಲುವು ಬಲಪಡಿಸಬೇಕು. ರಾಜ್ಯದ ಅಡ್ವೊಕೇಟ್ ಜನರಲ್ ಅವರು ಗಡಿ ಪ್ರದೇಶಗಳಲ್ಲಿ ಮರಾಠಿ ಮಾತನಾಡುವ ಜನರನ್ನು ಭೇಟಿ ಮಾಡಿ ಪ್ರಕರಣವನ್ನು ಮುನ್ನೆಲೆಗೆ ತರಬೇಕು ಎಂದು ರಾವತ್ ತಿಳಿಸಿದ್ದಾರೆ.
ಇದನ್ನೂ ಓದಿ:ಅಪರಿಚಿತ ಮೃತದೇಹದ ಅಂತ್ಯಕ್ರಿಯೆ.. ಮಹಿಳಾ ಕಾನ್ಸ್ಟೇಬಲ್ ಮಾನವೀಯತೆಗೆ ಸೆಲ್ಯೂಟ್
ಬೆಳಗಾವಿ ಮತ್ತು ಇತರ ವಿವಾದಿತ ಗಡಿ ಪ್ರದೇಶಗಳಲ್ಲಿನ ಶಿಕ್ಷಣ ಮತ್ತು ಸಾಂಸ್ಕೃತಿಕ ಸಂಸ್ಥೆಗಳಿಗೆ ಅನುದಾನ ನೀಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಸಂಸ್ಥೆಗಳನ್ನು ನೋಂದಾಯಿಸುವುದು ಕಡ್ಡಾಯವಾಗಿದೆ. ಆದರೆ ಕರ್ನಾಟಕ ಸರ್ಕಾರವು ಮರಾಠಿ ಅಥವಾ ಮಹಾರಾಷ್ಟ್ರ ಹೆಸರಿಗೆ ಹೊಂದಿಕೊಂಡ ಯಾವುದೇ ಸಂಸ್ಥೆಯ ನೋಂದಾವಣಿಗೆ ಅನುಮತಿಸುವುದಿಲ್ಲ ಎಂದು ರಾವತ್ ತಮ್ಮ ಬರಹದಲ್ಲಿ ತಿಳಿಸಿದ್ದಾರೆ.