ಮುಂಬೈ: 100 ಕೋಟಿ ರೂ. ಹಫ್ತಾ ಹಗರಣದ ಆರೋಪ ಕೇಳಿಬಂದ ಬೆನ್ನಲ್ಲೇ ಮಹಾರಾಷ್ಟ್ರ ಗೃಹ ಸಚಿವ, ಎನ್‌ಸಿಪಿ ಮುಖಂಡ ಅನಿಲ್ ದೇಶ್‌ಮುಖ್ ಅವರು ಮಂಗಳವಾರ ಸಂಜೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಅಧಿಕೃತ ನಿವಾಸ ವರ್ಷಾದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಭ್ರಷ್ಟಾಚಾರ ಆರೋಪದ ಬೆನ್ನಲ್ಲೇ ಉದ್ಧವ್ ಭೇಟಿಯಾದ ಅನಿಲ್ ದೇಶ್‌ಮುಖ್ - ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‌ಮುಖ್
ಹಿರಿಯ ಐಪಿಎಸ್ ಅಧಿಕಾರಿ ಪರಮ್ ಬೀರ್ ಸಿಂಗ್ ಮತ್ತು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‌ಮುಖ್ ಮಧ್ಯೆ ಜಟಾಪಟಿ ಮುಂದುವರೆದಿದ್ದು, ಈ ಬೆನ್ನಲ್ಲೇ ದೇಶ್‌ಮುಖ್ ಅವರು ಸಿಎಂ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಪ್ರತಿ ತಿಂಗಳು 100 ಕೋಟಿ ರೂ. ಹಣ ಸಂಗ್ರಹ ಮಾಡುವಂತೆ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆಗೆ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‌ಮುಖ್ ಒತ್ತಡ ಹೇರಿದ್ದರು ಎಂದು ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಆರೋಪ ಮಾಡಿದ್ದಾರೆ. ಈ ಬೆನ್ನಲ್ಲೇ ಇದೀಗ ನಿನ್ನೆ ದೇಶ್‌ಮುಖ್ ಸಿಎಂ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದು ಅನುಮಾನಗಳನ್ನು ಹುಟ್ಟುಹಾಕಿದೆ.
ಒಂದೆಡೆ ಎನ್‌ಸಿಪಿ ಮುಖಂಡರು ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಇನ್ನೊಂದೆಡೆ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರದ ವಿರುದ್ಧ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವಿಸ್ ವಾಗ್ದಾಳಿ ಮುಂದುವರೆಸಿದ್ದಾರೆ. ಠಾಕ್ರೆ ನೇತೃತ್ವದ ಸರ್ಕಾರ ವಿವಿಧ ಹಗರಣಗಳನ್ನು ನಡೆಸುತ್ತಿದ್ದು, ಇದರಲ್ಲಿ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳು ಮತ್ತು ರಾಜಕಾರಣಿಗಳು ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಜೊತೆಗೆ ಗೃಹ ಸಚಿವ ಅನಿಲ್ ದೇಶಮುಖ್ ರಾಜೀನಾಮೆ ನೀಡಬೇಕು. ಒಂದು ವೇಳೆ ಅನಿಲ್ ದೇಶ್‌ಮುಖ್ ರಾಜೀನಾಮೆ ನೀಡದಿದ್ದರೆ ಖುದ್ದು ಮುಖ್ಯಮಂತ್ರಿ ಅವರು ಗೃಹ ಸಚಿವರನ್ನು ತೆಗೆದುಹಾಕಬೇಕು. ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ.