ನವದೆಹಲಿ:ಕಳೆದೊಂದು ವಾರದಿಂದ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮಾ ಸುಪ್ರೀಂಕೋರ್ಟ್ ಅಂಗಳ ತಲುಪಿದೆ. ಬಂಡಾಯ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಮಹಾರಾಷ್ಟ್ರ ಸರ್ಕಾರ, ಶಿವಸೇನೆಯ ಶಾಸಕಾಂಗ ಪಕ್ಷದ ನಾಯಕ, ಎನ್‌ಸಿಪಿ ಮುಖ್ಯಸ್ಥ ಹಾಗೂ ಡೆಪ್ಯೂಟಿ ಸ್ಪೀಕರ್‌ಗೆ ನೋಟಿಸ್ ನೀಡಿದೆ. ಇದರ ಜೊತೆಗೆ ಮುಂದಿನ ವಿಚಾರಣೆಯನ್ನು ಜುಲೈ 11ಕ್ಕೆ ಮುಂದೂಡಿದೆ.
ಮಹಾರಾಷ್ಟ್ರ ವಿಧಾನಸಭೆಯ ಉಪಸಭಾಧ್ಯಕ್ಷ ನರಹರಿ ಝಿರ್ವಾಲ್ ನೀಡಿರುವ ಅನರ್ಹತೆಯ ನೋಟಿಸ್ ಪ್ರಶ್ನಿಸಿ ಬಂಡಾಯ ಶಾಸಕರು ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಡೆಪ್ಯೂಟಿ ಸ್ಪೀಕರ್‌ಗೆ ನೋಟಿಸ್ ನೀಡಿ ಮುಂದಿನ ಮೂರು ದಿನಗಳಲ್ಲಿ ಹಾಗೂ ಮಹಾರಾಷ್ಟ್ರ ಮೈತ್ರಿ ಸರ್ಕಾರ ಮುಂದಿನ ಐದು ದಿನಗಳಲ್ಲಿ ಉತ್ತರಿಸುವಂತೆ ತಿಳಿಸಿದೆ. ಇದರ ಜೊತೆಗೆ, ಅನರ್ಹತೆಯ ತೀರ್ಮಾನ ಕೈಗೊಳ್ಳುವಂತಿಲ್ಲ ಎಂದು ಸೂಚಿಸಿ, ಯಥಾಸ್ಥಿತಿ ಕಾಯ್ದುಕೊಳ್ಳಲು ತಿಳಿಸಿದೆ. ಈ ಮುಖೇನ ಸುಪ್ರೀಂಕೋರ್ಟ್ನಲ್ಲಿ ಬಂಡಾಯ ಶಾಸಕ ಏಕನಾಥ್ ಶಿಂದೆ ಬಣಕ್ಕೆ ಆರಂಭಿಕ ಮುನ್ನಡೆ ಸಿಕ್ಕಿದೆ.