ಮುಂಬೈ, ಮಹಾರಾಷ್ಟ್ರ:39 ದಿನಗಳ ಬಳಿಕ ಇಂದು ಬೆಳಗ್ಗೆ 11 ಗಂಟೆಗೆ ಶಿಂಧೆ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗುತ್ತಿದೆ. ಆದರೆ, ಈ ವಿಸ್ತರಣೆಗೂ ಮುನ್ನ ಶಿಂಧೆ ಗುಂಪಿನ ಎಲ್ಲ ಶಾಸಕರ ಮಹತ್ವದ ಸಭೆಯು ಸಹ್ಯಾದ್ರಿ ಅತಿಥಿಗೃಹದಲ್ಲಿ ಬೆಳಗ್ಗೆ ನಡೆಯಲಿದೆ. ಈ ಸಭೆಯಲ್ಲಿ ಸಚಿವ ಸ್ಥಾನದ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಶಾಸಕರಿಗೆ ಸಚಿವ ಸ್ಥಾನ ಸಿಗದ ಕಾರಣ ಅವರನ್ನು ಮನವೊಲಿಸುವ ಪ್ರಯತ್ನ ಮಾಡಲಾಗುವುದು.
ಜೂನ್ 30 ರಂದು ಏಕನಾಥ್ ಶಿಂಧೆ ಮತ್ತು ದೇವೇಂದ್ರ ಫಡ್ವಾನಿಸ್ ಕ್ರಮವಾಗಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ 39 ದಿನಗಳು ಕಳೆದರೂ ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಆಗಿರಲಿಲ್ಲ. ಸಂಪುಟ ವಿಸ್ತರಣೆಗಾಗಿ ಇಬ್ಬರೂ ಆಗಾಗ ದೆಹಲಿಗೆ ಭೇಟಿ ನೀಡುತ್ತಿದ್ದರು. ಆದರೆ, ಬಿಜೆಪಿ ಹೈಕಮಾಂಡ್ ಇದಕ್ಕೆ ಗ್ರೀನ್ ಸಿಗ್ನಲ್ ನೀಡರಲಿಲ್ಲ.
ರಾಜ್ಯದಲ್ಲಿನ ಅಧಿಕಾರದ ಹೋರಾಟಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಯಿಂದಾಗಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಅನಿಶ್ಚಿತತೆಯ ಚರ್ಚೆ ನಡೆದಿದೆ. ಆದ್ದರಿಂದ, ವಿರೋಧ ಪಕ್ಷಗಳಾದ ಶಿವಸೇನೆ, ಕಾಂಗ್ರೆಸ್ ಮತ್ತು ಎನ್‌ಸಿಪಿ ಶಿಂಧೆ ಸರ್ಕಾರವನ್ನು ಟೀಕಿಸಲು ಪ್ರಾರಂಭಿಸಿದವು. ಇದೀಗ ಈ ಹಿನ್ನೆಲೆ ಕೊನೆಗೂ ನಿನ್ನೆ ದೆಹಲಿಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಇಂದು ಸಚಿವ ಸಂಪುಟ ವಿಸ್ತರಣೆ ಮಾಡಲಾಗುತ್ತಿದೆ. ಆದರೆ, ಈ ವಿಸ್ತರಣೆಗೂ ಮುನ್ನ ಶಿಂಧೆ ಗುಂಪಿನ ಶಾಸಕರ ಮಹತ್ವದ ಸಭೆ ನಡೆಯುತ್ತಿದೆ.