ಕರ್ನಾಟಕ

karnataka

ETV Bharat / bharat

ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಭಾರಿ ಮುಖಭಂಗ: ಭದ್ರಕೋಟೆ 'ಕಸ್ಬಾ ಪೇಠ್' ಭೇದಿಸಿದ ಕಾಂಗ್ರೆಸ್​ - ಶಿವಸೇನೆ

ಪುಣೆ ಜಿಲ್ಲೆಯ ಕಸ್ಬಾ ಪೇಠ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್​ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 28 ವರ್ಷಗಳ ನಂತರ ಬಿಜೆಪಿ ತನ್ನ ಕ್ಷೇತ್ರವನ್ನು ಕಳೆದುಕೊಂಡಿದೆ.

maha-bypolls-bjp-loses-kasba-assembly-seat-to-congress
ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಭಾರಿ ಮುಖಭಂಗ: ಭದ್ರಕೋಟೆ 'ಕಸ್ಬಾ ಪೇಠ್' ಭೇದಿಸಿದ ಕಾಂಗ್ರೆಸ್​

By

Published : Mar 2, 2023, 3:57 PM IST

ಪುಣೆ (ಮಹಾರಾಷ್ಟ್ರ):ನೆರೆಯ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಕಸ್ಬಾ ಪೇಠ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗವಾಗಿದೆ. ಗುರುವಾರ ಪ್ರಕಟಗೊಂಡ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರವೀಂದ್ರ ಧಾಂಗೇಕರ್ 10 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕೇಸರಿ ಪಕ್ಷದ ಅಭ್ಯರ್ಥಿ ಹೇಮಂತ್ ರಸಾನೆ ಸೋಲು ಕಂಡಿದ್ದಾರೆ.

ಕಸ್ಬಾ ಪೇಠ್ ವಿಧಾನಸಭಾ ಕ್ಷೇತ್ರದಲ್ಲಿ 28 ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿತ್ತು. ಪುಣೆಯ ಹಾಲಿ ಬಿಜೆಪಿ ಸಂಸದ ಗಿರೀಶ್ ಬಾಪಟ್ 2019ರವರೆಗೆ ಐದು ಬಾರಿ ಗೆಲುವು ಸಾಧಿಸಿ, ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. 2019ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಮುಕ್ತಾ ತಿಲಕ್‌ ಕಸ್ಬಾ ಪೇಠ್ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಆದರೆ, 2022ರ ಡಿಸೆಂಬರ್​​ನಲ್ಲಿ ಕ್ಯಾನ್ಸರ್​ನಿಂದಾಗಿ ಮೃತ ಪಟ್ಟಿದ್ದರು. ಹೀಗಾಗಿ ಉಪ ಚುನಾವಣೆ ಎದುರಾಗಿತ್ತು.

ಈ ಉಪ ಚುನಾವಣೆಯಲ್ಲಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್​ಸಿಪಿ), ಕಾಂಗ್ರೆಸ್ ಹಾಗೂ ಶಿವಸೇನೆ (ಉದ್ಧವ್ ಬಾಳಾ ಸಾಹೇಬ್ ಠಾಕ್ರೆ) ಮೈತ್ರಿಕೂಟದ ಮಹಾ ವಿಕಾಸ್ ಅಘಾಡಿಯ ಬೆಂಬಲವನ್ನು ಹೊಂದಿದ್ದ ಕಾಂಗ್ರೆಸ್​ನ ರವೀಂದ್ರ ಧಂಗೇಕರ್​ ಅವರು ಬಿಜೆಪಿಯ ಭದ್ರಕೋಟೆಯನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚುನಾವಣಾ ಆಯೋಗದ ವೆಬ್‌ಸೈಟ್‌ನ ಅಂಕಿ-ಅಂಶಗಳ ಪ್ರಕಾರ, ಅಂತಿಮ ಸುತ್ತಿನ ಮತ ಎಣಿಕೆಯ ನಂತರ ಧಂಗೇಕರ್ 73,194 ಮತಗಳು ಗಳಿಸಿದ್ದರೆ, ಬಿಜೆಪಿಯ ಹೇಮಂತ್ ರಾಸಾನೆ 62,244 ಮತಗಳು ಪಡೆದಿದ್ದಾರೆ.

ನೇರ ಪೈಪೋಟಿ: ಕಳೆದ ವರ್ಷ ಜೂನ್‌ನಲ್ಲಿ ಮಹಾರಾಷ್ಟ್ರದಲ್ಲಿ ಸರ್ಕಾರ ಬದಲಾಗಿತ್ತು. ಮಹಾ ವಿಕಾಸ್ ಅಘಾಡಿಯ ಸರ್ಕಾರದಲ್ಲಿ ಸಿಎಂ ಆಗಿದ್ದ ಉದ್ಧವ್​ ಠಾಕ್ರೆ ವಿರುದ್ಧ ಶಿವಸೇನೆಯ ಏಕನಾಥ್​ ಶಿಂಧೆ ಬಂಡಾಯ ಎದ್ದಿದ್ದರು. ನಂತರದಲ್ಲಿ ಸುಮಾರು 50 ಶಾಸಕರೊಂದಿಗೆ ಬಿಜೆಪಿಯೊಂದಿಗೆ ಸೇರಿ ಏಕನಾಥ್​ ಸರ್ಕಾರ ರಚನೆ ಮಾಡಿದ್ದರು. ಆಡಳಿತಾರೂಢ ಬಿಜೆಪಿ-ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಎದುರಾಳಿ ಮಹಾ ವಿಕಾಸ್ ಅಘಾಡಿಯ ನಡುವಿನ ಮೊದಲ ನೇರ ಸ್ಪರ್ಧೆ ಕಸ್ಬಾ ಪೇಠ್ ಕ್ಷೇತ್ರದ ಉಪ ಚುನಾವಣೆಯಾಗಿತ್ತು. ಹೀಗಾಗಿ ಕಾಂಗ್ರೆಸ್ ಗೆಲುವು ಮಹತ್ವದ್ದಾಗಿದೆ.

ಚುನಾವಣಾ ಫಲಿತಾಂಶದ ನಂತರ ಪ್ರತಿಕ್ರಿಯಿಸಿರುವ ಕಾಂಗ್ರೆಸ್​ನ ರವೀಂದ್ರ ಧಾಂಗೇಕರ್, 'ಇದು ಜನತೆಯ ಗೆಲುವು. ನಾನು ನಾಮಪತ್ರ ಸಲ್ಲಿಸಿದ ದಿನವೇ ಕಸ್ಬಾ ಪೇಠ್​ ಕ್ಷೇತ್ರದ ಜನರು ನನ್ನನ್ನು ಗೆಲ್ಲಿಸಲು ನಿರ್ಧರಿಸಿದ್ದರು' ಎಂದು ಹೇಳಿದರು. ಮತ ಎಣಿಕೆ ಕೇಂದ್ರದ ಹೊರಗೆ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಅಭ್ಯರ್ಥಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಕುಣಿದು ಸಂಭ್ರಮಿಸಿದ್ದಾರೆ.

ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಮೋಹನ್ ಜೋಶಿ ಮಾತನಾಡಿ, ಇದೊಂದು ಐತಿಹಾಸಿಕ ಗೆಲುವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಅತ್ಯಂತ ಒಗ್ಗಟ್ಟಿನಿಂದ ಹೋರಾಡಿದ ಎಂವಿಎ ಕಾರ್ಯಕರ್ತರೆಲ್ಲರ ಗೆಲುವು ಇದು. ಜನತೆ ಬಲದ ಮುಂದೆ ಬಿಜೆಪಿಯ ಹಣಬಲ ಕೆಲಸ ಮಾಡುವುದಿಲ್ಲ ಎಂಬುದನ್ನು ಈ ಚುನಾವಣೆ ತೋರಿಸಿಕೊಟ್ಟಿದೆ ಎಂದು ಹೇಳಿದರು. ಮತ್ತೊಂದೆಡೆ, ಬಿಜೆಪಿಯ ಸೋತ ಅಭ್ಯರ್ಥಿ ರಾಸಾನೆ ಮಾತನಾಡಿ, ಈ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಸೋಲು ಅನುಭವಿಸಿದ್ದೇನೆ. ಎಲ್ಲಿ, ಏನು ತಪ್ಪಾಗಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು. ಇನ್ನು, ಈ ಹಿಂದೆ ಕಸ್ಬಾ ಪೇಠ್​ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುತ್ತಿತ್ತು. ಆದರೆ, ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಉಂಟಾಗಿತ್ತು.

ಇದನ್ನೂ ಓದಿ:ತಿಪ್ರಾ ಮೋಥಾ ಪಕ್ಷದೊಂದಿಗೆ ಮೈತ್ರಿ ಮಾತುಕತೆ: ತ್ರಿಪುರಾಗೆ ಆಗಮಿಸಿದ ಕಾಂಗ್ರೆಸ್ ನಾಯಕರು

ABOUT THE AUTHOR

...view details