ಅಜ್ಮೀರ್ (ರಾಜಸ್ಥಾನ): ಒಬ್ಬ ವ್ಯಕ್ತಿಯು ಕಣ್ಣುಮುಚ್ಚಿ ಬೈಕು ಓಡಿಸಲು ಸಾಧ್ಯವೇ! ಈ ಪ್ರಶ್ನೆಗೆ ಉತ್ತರ ನೀಡಿದ್ದಾರೆ ಹೈದರಾಬಾದ್ ಮೂಲದ ಜಾದೂಗಾರ.
ಜಾದೂಗಾರ ರಾಮಕೃಷ್ಣ ಅವರು ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಪ್ರಯಾಣಿಸುತ್ತಿದ್ದಾರೆ. ಅವರು ಈಗ ರಾಜಸ್ಥಾನದ ಅಜ್ಮೇರ್‌ಗೆ ತಲುಪಿದ್ದಾರೆ. 31 ದಿನಗಳಲ್ಲಿ ಕಾಶ್ಮೀರ ತಲುಪುವುದು ಅವರ ಗುರಿಯಾಗಿದೆ. ತನ್ನ ಕನಸನ್ನು ಈಡೇರಿಸುವುದರ ಹೊರತಾಗಿ, ಈ ಮೂಲಕ ಕೊರೊನಾ ಮತ್ತು ಸಂಚಾರ ನಿಯಮಗಳನ್ನು ಪಾಲಿಸುವ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
19 ರಾಜ್ಯಗಳು ಮತ್ತು 121 ನಗರಗಳನ್ನು ದಾಟಿ ಕಾಶ್ಮೀರಕ್ಕೆ ಹೋಗುವ ಗುರಿಯೊಂದಿಗೆ ಕನ್ಯಾಕುಮಾರಿಯಿಂದ ಪ್ರಯಾಣ ಪ್ರಾರಂಭಿಸಿದ ಹೈದರಾಬಾದ್‌ನ ರಾಮಕೃಷ್ಣ ಅವರು, ಮಂಗಳವಾರ ಅಜ್ಮೇರ್ ತಲುಪಿದ್ದಾರೆ. ಬೈಕ್‌ನಲ್ಲಿ 10,000 ಕಿ.ಮೀ ದೂರವನ್ನು ಕ್ರಮಿಸಲು ಉದ್ದೇಶಿಸಿದ್ದಾರೆ. ಅದು ಕೂಡ 31 ದಿನಗಳಲ್ಲಿ ಕಣ್ಣು ಮುಚ್ಚಿಕೊಂಡು. ಕೇವಲ ಕಣ್ಣು ಮಾತ್ರ ಮುಚ್ಚಿಕೊಳ್ಳದೆ ಸಂಪೂರ್ಣ ಮುಖವನ್ನು ಕಪ್ಪು ಬಟ್ಟೆಯಿಂದ ಮುಚ್ಚಿಕೊಂಡಿದ್ದಾರೆ.
ವಿಶ್ರಾಂತಿ ಪಡೆಯಲು ನಿಲ್ಲಿಸಿದಾಗ ಮಾತ್ರ ಬಟ್ಟೆಯನ್ನು ತೆಗೆಯಲಾಗುತ್ತದೆ. ಅಜ್ಮೇರ್‌ಗೆ ಆಗಮಿಸಿದ ಸ್ಥಳೀಯ ಜಾದೂಗಾರ ರಾಜೇಂದ್ರ ಶರ್ಮಾ ಮತ್ತು ಇತರರು ಅವರನ್ನು ಜಿಲ್ಲಾ ಕೇಂದ್ರದ ಬಳಿ ಸ್ವಾಗತಿಸಿದರು. ರಾತ್ರಿ ವೇಳೆ ವಿಶ್ರಾಂತಿ ಪಡೆದು ನಂತರ ರಾಮಕೃಷ್ಣ ಅವರು ಬುಧವಾರ ಜೈಪುರಕ್ಕೆ ತಮ್ಮ ಪ್ರಯಾಣವನ್ನು ಪುನಾರಂಭಿಸಲಿದ್ದಾರೆ.
'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, "ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡುತ್ತೇವೆ. ಅಷ್ಟೇ ಅಲ್ಲದೆ, ಸಂಚಾರ ನಿಯಮಗಳನ್ನು ಪಾಲಿಸುವಂತೆ ನೋಡಿಕೊಳ್ಳಬೇಕು. ಇದರಲ್ಲಿ ಹೆಲ್ಮೆಟ್ ಧರಿಸುವುದು ಮತ್ತು ಸೀಟ್ ಬೆಲ್ಟ್ ಬಳಸುವುದು ಸಹ ಸೇರಿದೆ. ಪಾಲಿಥಿನ್ ಬಳಕೆಯನ್ನು ನಿಲ್ಲಿಸುವಂತೆ ಜನರನ್ನು ಕೇಳಿಕೊಳ್ಳುತ್ತೇನೆ ಎಂದರು.