ಲಖನೌ (ಉತ್ತರ ಪ್ರದೇಶ): ರಾಜಕಾರಣಿಯಾಗಿ ಬದಲಾಗಿರುವ ಗ್ಯಾಂಗ್ಸ್ಟರ್ ಅತೀಕ್ ಅಹ್ಮದ್ ಪುತ್ರ ಅಸದ್ ಸೇರಿ ಇಬ್ಬರು ಪೊಲೀಸ್ ಎನ್ಕೌಂಟರ್ನಲ್ಲಿ ಹತರಾಗಿದ್ದಾರೆ. ಝಾನ್ಸಿಯಲ್ಲಿ ಈ ಎನ್‌ಕೌಂಟರ್ ನಡೆದಿದ್ದು, ಅತ್ಯಾಧುನಿಕ ವಿದೇಶಿ ನಿರ್ಮಿತ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಯಾಗ್‌ರಾಜ್‌ನ ವಕೀಲ ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಅಸದ್ ಮತ್ತು ಶೂಟರ್ ಗುಲಾಮ್ ಎಂಬುವವರು ಪೊಲೀಸರಿಗೆ ಬೇಕಾಗಿದ್ದರು. ಅಲ್ಲದೇ, ಈ ಇಬ್ಬರ ಬಗ್ಗೆ ಸುಳಿವು ನೀಡಿದವರಿಗೆ ತಲಾ ಐದು ಲಕ್ಷ ರೂಪಾಯಿ ಬಹುಮಾನವನ್ನು ಪೊಲೀಸರು ಘೋಷಿಸಿದ್ದರು. ಇಂದು ಡಿವೈಎಸ್ಪಿ ನಾವೆಂದು ನೇತೃತ್ವದ ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ (ಯುಪಿಎಸ್ಟಿಎಫ್) ತಂಡದೊಂದಿಗೆ ನಡೆದ ಎನ್ಕೌಂಟರ್ನಲ್ಲಿ ಇಬ್ಬರೂ ಸಹ ಹತರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಫೆಬ್ರವರಿ 24ರಂದು ಧೂಮಂಗಂಜ್‌ನಲ್ಲಿ ಉಮೇಶ್ ಪಾಲ್ ಮೇಲೆ ಅಸಾದ್ ಗುಂಡಿನ ದಾಳಿ ನಡೆಸುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇಂದು ಅಸದ್ ಮತ್ತು ಶೂಟರ್ ಗುಲಾಮ್ ಇಬ್ಬರಿಗೂ ಶರಣಾಗುವಂತೆ ಪೊಲೀಸ್ ತಂಡ ಸೂಚಿಸಿತ್ತು. ಆದರೆ, ಪೊಲೀಸರ ಮೇಲೆ ಆರೋಪಿಗಳು ಗುಂಡು ಹಾರಿಸಿದರು. ಇದರಿಂದ ನಮ್ಮ ಪೊಲೀಸ್ ತಂಡವು ಪ್ರತಿದಾಳಿ ನಡೆಸಬೇಕಾಯಿತು ಎಂದು ವಿಶೇಷ ಕಾರ್ಯಪಡೆ ಎಡಿಜಿ ಅಮಿತಾಭ್ ಯಶ್ ತಿಳಿಸಿದ್ದಾರೆ.
ಮತ್ತೊಂದೆಡೆ, ಇದೇ ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ನನ್ನು ಇಂದು ಬೆಳಗ್ಗೆ ಪ್ರಯಾಗರಾಜ್‌ನಲ್ಲಿರುವ ಸಿಜೆಎಂ ನ್ಯಾಯಾಲಯಕ್ಕೆ ಪೊಲೀಸರು ಕರೆತಂದಿದ್ದಾರೆ. ತನ್ನ ಮಗನ ಎನ್‌ಕೌಂಟರ್ ಬಗ್ಗೆ ತಿಳಿಸಿದಾಗ ಅತೀಕ್ ಅಹ್ಮದ್ ಕಣ್ಣೀರು ಹಾಕಿದರು ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.