ಮಧುರೈ(ತಮಿಳುನಾಡು):ಮದುವೆ ಆಗುವುದಾಗಿ ನಂಬಿಸಿ ಲೈಂಗಿಕ ಕ್ರಿಯೆ ನಡೆಸುವುದು ಅತ್ಯಾಚಾರಕ್ಕೆ ಸಮ ಎಂದು ಕಳೆದ ಕೆಲ ದಿನಗಳ ಹಿಂದೆ ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಆದರೆ, ತಮಿಳುನಾಡಿನ ಮದ್ರಾಸ್ ಹೈಕೋರ್ಟ್ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿದ್ದು, ಆರೋಪಿಗೆ ಶಿಕ್ಷೆಯ ಪ್ರಮಾಣ ಕಡಿಮೆ ಮಾಡಿದೆ.
ಏನಿದು ಪ್ರಕರಣ?
ರಾಮನಾಥಪುರಂ ಜಿಲ್ಲೆಯ ಮಲೈಚಾಮಿ ಅದೇ ಪ್ರದೇಶದ ಯುವತಿ ಜೊತೆ ಪರಿಚಯವಾಗಿದ್ದು, ಮದುವೆಯಾಗುವುದಾಗಿ ನಂಬಿಸಿ ಹಲವು ದಿನಗಳ ಕಾಲ ಲೈಂಗಿಕ ಸಂಬಂಧ ಬೆಳೆಸಿದ್ದಾನೆ. ಆಕೆ ಗರ್ಭಿಣಿಯಾಗುತ್ತಿದ್ದಂತೆ ಮದುವೆ ಮಾಡಿಕೊಳ್ಳಲು ನಿರಾಕರಣೆ ಮಾಡಿದ್ದಾನೆ.
ಈ ವೇಳೆ ಯುವತಿ ಘಟನೆ ಬಗ್ಗೆ ತನ್ನ ಪೋಷಕರಿಗೆ ತಿಳಿಸಿದ್ದು, ಅಬಿರಾಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲು ಮಾಡಿಕೊಂಡಿರುವ ಮಲೈಚಾಮಿ ಬಂಧನ ಮಾಡಿದ್ದಾರೆ. ಈ ಮಧ್ಯೆ ಗರ್ಭಿಣಿ ಯುವತಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.
ಘಟನೆ ಬಗ್ಗೆ ಚಾರ್ಜ್ಶೀಟ್ ಸಲ್ಲಿಕೆ ಮಾಡಿರುವ ಪೊಲೀಸರು ರಾಮನಾಥಪುರಂ ಜಿಲ್ಲಾ ಮಹಿಳಾ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ, ಕೆಳ ನ್ಯಾಯಾಲಯದಿಂದ 10 ವರ್ಷ ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿದೆ.
ಇದನ್ನೂ ಓದಿರಿ:ಹೆಣ್ಣು ಮಗು ಹುಟ್ಟಿರುವ ಸಂಭ್ರಮ.. ಗ್ರಾಹಕರಿಗೆ ಹೆಚ್ಚುವರಿ 'ಉಚಿತ ಪೆಟ್ರೋಲ್' ನೀಡಿದ ಬಂಕ್ ಮಾಲೀಕ..
ಕಳೆ ನ್ಯಾಯಾಲಯದ ತೀರ್ಪಿನ ವಿರುದ್ಧ ಮಲೈಚಾಮಿ ಮಧುರೈ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಕೆ ಮಾಡಿದ್ದಾರೆ. ಇದರ ವಿಚಾರಣೆ ನಡೆಸಿರುವ ನ್ಯಾಯಾಧೀಶ ಪೊಂಗಿಯಪನ್, ಯುವತಿಗೆ ಸುಳ್ಳು ಭರವಸೆ ನೀಡಿ, ಲೈಂಗಿಕ ಸಂಬಂಧ ಹೊಂದಿರುವುದು ದೃಢಪಟ್ಟಿದೆ. ಆದರೆ, ಇಬ್ಬರು ಪರಸ್ಪರ ಸಂಬಂಧ ಹೊಂದಿರುವುದು ವಾಸ್ತವದಲ್ಲಿ ಅಲ್ಲಗಳೆಯಲು ಆಗುವುದಿಲ್ಲ.
ಅಷ್ಟೇ ಅಲ್ಲ, ಇಬ್ಬರ ನಡುವಿನ ಸಲುಗೆ ವೇಳೆ ಮಹಿಳೆ ನೀಡಿದ ಒಪ್ಪಿಗೆಯನ್ನು ವಾಸ್ತವದಲ್ಲಿ ತಪ್ಪು ಕಲ್ಪನೆ ಎಂದು ಪರಿಗಣಿಸಲಾಗದು ಎಂದೂ ಇದೇ ವೇಳೆ ನ್ಯಾಯಾಲಯ ಅಭಿಪ್ರಾಯಪಟ್ಟಿತು. ಅಷ್ಟೇ ಅಲ್ಲ ಅವರು ಪರಸ್ಪರ ಸಂಬಂಧ ಹೊಂದಿದ್ದಾರೆ ಎಂಬ ಅಂಶವನ್ನು ಇದೇ ವೇಳೆ ನ್ಯಾಯಮೂರ್ತಿಗಳು ಗಮನಿಸಿದ್ದಾರೆ. ನಂಬಿಸಿ ಮೋಸ ಮಾಡಿದ್ದ ಕಾರಣಕ್ಕಾಗಿಯೇ ಆರೋಪಿ 10 ವರ್ಷಗಳ ಜೈಲುಶಿಕ್ಷೆ ಅನುಭವಿಸಬೇಕಾಗಿಲ್ಲ ಎಂದಿದೆ.
ಆದರೆ, ಭಾರತೀಯ ದಂಡ ಸಂಹಿತೆ ಸೆಕ್ಷನ್ 417ರ ಅಡಿಯಲ್ಲಿ 1 ವರ್ಷ ಕಠಿಣ ಶಿಕ್ಷೆ ಹಾಗೂ ಮಗುವಿನ ಹೆಸರಿನಲ್ಲಿ ಐದು ಲಕ್ಷ ರೂ. ಜಮಾ ಮಾಡುವಂತೆ ಆದೇಶ ನೀಡಿದೆ.