ಮಧುರೈ (ತಮಿಳುನಾಡು):ಮಧುರೈನ ಅಲಂಗನಲ್ಲೂರಿನಲ್ಲಿ ನಡೆದ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಪ್ರೇಕ್ಷಕರು ಸೇರಿದಂತೆ 53 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಈ ಜಲ್ಲಿಕಟ್ಟು ಸ್ಪರ್ಧೆಯಲ್ಲಿ 825 ಹೋರಿಗಳು ಮತ್ತು 303 ಗೂಳಿ ಪಳಗಿಸುವವರು ಭಾಗವಹಿಸಿದ್ದರು. ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, 10 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಧುರೈನ ಸರ್ಕಾರಿ ರಾಜಾಜಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳವಾರ ನಡೆದ ಈ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಶಿವಗಂಗೈ ಜಿಲ್ಲೆಯ ಪೂವಂತಿಯ ಅಬಿ ಸಿದ್ದರ್ ಅವರು ಅತಿ ಹೆಚ್ಚು ಸಂಖ್ಯೆಯ ಹೋರಿಗಳನ್ನು ಪಳಗಿಸಿ ಐಷಾರಾಮಿ ಕಾರು ಹಾಗೂ ಭಾರಿ ನಗದು ಬಹುಮಾನ ಪಡೆದರು. ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಪರವಾಗಿ ಸಿದ್ದರ್ 26 ಗೂಳಿಗಳನ್ನು ಪಳಗಿಸಿ ಬಹುಮಾನ ಪಡೆದರು.
ಪೊಂಗಲ್ ಹಬ್ಬದ ನಿಮಿತ್ತವಾಗಿ ತಮಿಳುನಾಡು ಯುವ ಕಲ್ಯಾಣ ಮತ್ತು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಅವರು ಮಂಗಳವಾರ ಇಲ್ಲಿ ಜಲ್ಲಿಕಟ್ಟು ಸ್ಪರ್ಧೆಗೆ ಚಾಲನೆ ನೀಡಿದರು. ಮಧುರೈ ಜಿಲ್ಲಾಧಿಕಾರಿ ಅನೀಶ್ ಶೇಖರ್, ಸಚಿವರಾದ ಮೂರ್ತಿ, ಪಿಟಿಆರ್ ಪಳನಿವೇಲ್ ತ್ಯಾಗರಾಜನ್, ಅನ್ಬಿಲ್ ಮಹೇಶ್ ಪೊಯ್ಯಮೊಳಿ, ವಿಧಾನಸಭಾ ಸದಸ್ಯರಾದ ವೆಂಕಟೇಶನ್, ದಳಪತಿ, ಮತ್ತು ನಟ ಸೂರಿ ಮುಂತಾದವರು ಉಪಸ್ಥಿತರಿದ್ದರು.
ತಮಿಳ್ ಸೆಲ್ವನ್ ಎಂಬುವರ ಗೂಳಿಯು ಗೂಳಿ ಪಳಗಿಸುವವರನ್ನು ತಪ್ಪಿಸಿ ತನ್ನ ಮಾಲೀಕರಿಗೆ ಕಾರು ಮತ್ತು ಒಂದು ಹಸು ಗೆದ್ದುಕೊಂಡಿದೆ. ಪುದುಕೊಟ್ಟೈನ ಸುರೇಶ್ ಅವರ ಗೂಳಿ ದ್ವಿತೀಯ ಸ್ಥಾನ ಪಡೆದು ಬೈಕ್ ಪುರಸ್ಕೃತರಾದರೆ, ಉಸಿಲಂಪಟ್ಟಿ ಸಮೀಪದ ವೆಲ್ಲಂ ಪಾಲಂ ಪಟ್ಟಿಯ ಪಟ್ಟಾಣಿ ರಾಜಾ ಅವರ ಗೂಳಿ ತೃತೀಯ ಸ್ಥಾನ ಪಡೆದು ಟಿವಿಎಸ್ ಎಕ್ಸೆಲ್ ಬಹುಮಾನ ಪಡೆಯಿತು. 26 ಗೂಳಿಗಳನ್ನು ಪಳಗಿಸಿ ಪ್ರಥಮ ಸ್ಥಾನ ಪಡೆದ ಸಿದ್ದರ್ 7 ಲಕ್ಷ ರೂಪಾಯಿ ನಗದು ಬಹುಮಾನವನ್ನೂ ಪಡೆದರು.