ಕರ್ನಾಟಕ

karnataka

ETV Bharat / bharat

ಅಕ್ರಮ ಆಸ್ತಿ ಗಳಿಕೆ ಪ್ರಕರಣ: ತಮಿಳುನಾಡಿನ ಸಚಿವ ಪೊನ್ಮುಡಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿದ ಮದ್ರಾಸ್ ಹೈಕೋರ್ಟ್

ಉನ್ನತ ಶಿಕ್ಷಣ ಸಚಿವ ಮತ್ತು ಡಿಎಂಕೆ ನಾಯಕ ಕೆ. ಪೊನ್ಮುಡಿ ಅವರಿಗೆ ಮದ್ರಾಸ್ ಹೈಕೋರ್ಟ್ 3 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.1.75 ಕೋಟಿ ರೂಪಾಯಿ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಚಿವ ಕೆ.ಪೊನ್ಮುಡಿ ಹಾಗೂ ಅವರ ಪತ್ನಿ ಪಿ.ವಿಶಾಲಾಕ್ಷಿ ಅವರನ್ನು ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದೆ.

Madras High Court
ಅಕ್ರಮ ಆಸ್ತಿ ಗಳಿಕೆ ಪ್ರಕರಣ: ತಮಿಳುನಾಡಿನ ಸಚಿವ ಪೊನ್ಮುಡಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿದ ಮದ್ರಾಸ್ ಹೈಕೋರ್ಟ್

By ETV Bharat Karnataka Team

Published : Dec 21, 2023, 12:20 PM IST

Updated : Dec 21, 2023, 12:49 PM IST

ಚೆನ್ನೈ (ತಮಿಳುನಾಡು):ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಶಿಕ್ಷಣ ಸಚಿವ ಹಾಗೂ ಡಿಎಂಕೆ ನಾಯಕ ಕೆ. ಪೊನ್ಮುಡಿ ಅವರಿಗೆ ಮದ್ರಾಸ್ ಹೈಕೋರ್ಟ್ ಇಂದು (ಗುರುವಾರ) ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ನ್ಯಾಯಾಲಯವು ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಿದೆ.

ಸಚಿವ ಪೊನ್ಮುಡಿ ಹಾಗೂ ಅವರ ಪತ್ನಿ ವಿಶಾಲಾಕ್ಷಿ ಇಂದು ಬೆಳಗ್ಗೆ 10 ಗಂಟೆಗೆ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿದ್ದರು. ಇದರೊಂದಿಗೆ ಕೋರ್ಟ್ ಆವರಣದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ನ್ಯಾಯಮೂರ್ತಿ ಜಯಚಂದ್ರ ಅವರು ಪ್ರಕರಣದ ಶಿಕ್ಷೆಯ ವಿವರಗಳನ್ನು ಓದಲು ಪ್ರಾರಂಭಿಸುವ ಮೊದಲು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಸಚಿವ ಪೊನ್ಮುಡಿ ಅವರಿಗೆ ಹೈಕೋರ್ಟ್ ನ್ಯಾಯಮೂರ್ತಿ ಅವಕಾಶ ಕೊಟ್ಟರು.

ಅದನ್ನು ಲಿಖಿತವಾಗಿ ಅಥವಾ ಮೌಖಿಕವಾಗಿ ತಿಳಿಸುವಂತೆ ಸಲಹೆ ನೀಡಿದರು. ಆಗ ಸಚಿವ ಪೊನ್ಮುಡಿ ಕಡೆಯವರು ಸಚಿವರ ವೈದ್ಯಕೀಯ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಶಿಕ್ಷೆ ವಿಧಿಸುವ ಮುನ್ನ ಅದನ್ನು ಪರಿಗಣಿಸುವಂತೆ ನ್ಯಾಯಾಧೀಶರಿಗೆ ಮನವಿ ಮಾಡಿದರು. ಬಳಿಕ ಸಚಿವ ಪೊನ್ಮುಡಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಮೂರ್ತಿ ಜಿ. ಜಯಚಂದ್ರ ತೀರ್ಪು ಪ್ರಕಟಿಸಿದರು. ಜೊತೆಗೆ ಸಚಿವ ಪೊನ್ಮುಡಿ ಹಾಗೂ ಅವರ ಪತ್ನಿಗೆ ತಲಾ 50 ಲಕ್ಷ ದಂಡ ವಿಧಿಸಿ ಆದೇಶ ಹೊರಡಿಸಿದರು.

ನ್ಯಾಯಾಲಯ ಮೂರು ವರ್ಷಗಳ ಶಿಕ್ಷೆ ವಿಧಿಸಿರುವುದರಿಂದ ಸ್ವಯಂಚಾಲಿತವಾಗಿ ಅವರ ಶಾಸಕ ಸ್ಥಾನ ಅನರ್ಹವಾಗುತ್ತದೆ. ಅವರನ್ನು ಎಂಕೆ ಸ್ಟಾಲಿನ್ ನೇತೃತ್ವದ ಸಚಿವ ಸಂಪುಟದಿಂದ ಕೈಬಿಡಬಹುದು.

ಪ್ರಕರಣದ ಹಿನ್ನೆಲೆ ಏನು?:2016ರ ಏಪ್ರಿಲ್​ನಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದ ವಿಲ್ಲುಪುರಂ ವಿಶೇಷ ನ್ಯಾಯಾಲಯವು, ಆರೋಪಿ ಪೊನ್ಮುಡಿ ಹಾಗೂ ಅವರ ಪತ್ನಿ ಮೇಲಿನ ಸಾಕ್ಷ್ಯಾಧಾರಗಳು ಸಾಬೀತುಪಡಿಸದ ಹಿನ್ನೆಲೆ ಅವರಿಬ್ಬರನ್ನು ಆರೋಪಮುಕ್ತಗೊಳಿಸಿತ್ತು. ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಭ್ರಷ್ಟಾಚಾರ ನಿಗ್ರಹ ದಳವು 2016ರಲ್ಲಿ ಮದ್ರಾಸ್​ ಹೈಕೋರ್ಟ್​ನಲ್ಲಿ ಮೇಲ್ಮನವಿ ದಾಖಲಿಸಿತ್ತು. ಆ ಅರ್ಜಿಯನ್ನು ನ್ಯಾಯಮೂರ್ತಿ ಜಿ. ಜಯಚಂದ್ರ ಅವರಿದ್ದ ಪೀಠ ವಿಚಾರಣೆ ನಡೆಸಿತ್ತು. ವಿಲ್ಲುಪುರಂ ನ್ಯಾಯಾಲಯ ತಪ್ಪಾದ ತೀರ್ಪು ನೀಡಿದೆ ಎಂದು ಹೇಳುವ ಮೂಲಕ ಈ ಇಬ್ಬರು ಆರೋಪಿನ್ನೂ ದೋಷಿಗಳೆಂದು ತೀರ್ಪು ಕೊಟ್ಟಿದೆ.

2006ರಿಂದ 2011ರವರೆಗೆ ಡಿಎಂಕೆ ಆಡಳಿತದಲ್ಲಿ ಉನ್ನತ ಶಿಕ್ಷಣ ಮತ್ತು ಖನಿಜ ಸಂಪನ್ಮೂಲ ಸಚಿವರಾಗಿದ್ದ ಸಮಯದಲ್ಲಿ ಸಚಿವ ಪೊನ್ಮುಡಿ ಅವರು ಆದಾಯಕ್ಕಿಂತಲೂ 1.79 ಕೋಟಿ ರೂಪಾಯಿ ಹೆಚ್ಚು ಅಕ್ರಮ ಆಸ್ತಿ ಹೊಂದಿದ್ದಾರೆ ಎಂದು ಆರೋಪಿಸಿ, ಭ್ರಷ್ಟಾಚಾರ ನಿಗ್ರಹ ದಳ ಪ್ರಕರಣ ದಾಖಲು ಮಾಡಿತ್ತು. 2016ರಲ್ಲಿ ಈ ಪ್ರಕರಣದ ವಿಚಾರಣೆ ನಡೆಸಿದ್ದ ವಿಲ್ಲುಪುರಂ ವಿಚಾರಣಾ ನ್ಯಾಯಾಲಯ ಆರೋಪಿಗಳಿಬ್ಬರನ್ನು ಖುಲಾಸೆಗೊಳಿಸಿತ್ತು. ಪ್ರಸ್ತುತ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್​ ಹೈಕೋರ್ಟ್​, ಸಚಿವರು ತಮ್ಮ ಪತ್ನಿಯ ಹೆಸರಿನಲ್ಲಿ ಆಸ್ತಿ ಸಂಗ್ರಹಿಸಿರುವುದು ದೃಢಪಟ್ಟಿದ್ದು, ಇಬ್ಬರನ್ನೂ ದೋಷಿಗಳೆಂದು ಹೇಳಿ ಶಿಕ್ಷೆ ವಿಧಿಸಿದೆ.

ಇದನ್ನೂ ಓದಿ:ಬಲ್ವಂತ್ ಸಿಂಗ್ ರಾಜೋನಾ ಕ್ಷಮಾದಾನ ಅರ್ಜಿ: ಲೋಕಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಹೇಳಿದ್ದೇನು?

Last Updated : Dec 21, 2023, 12:49 PM IST

ABOUT THE AUTHOR

...view details