ಬಾಗ್ದೋಗ್ರಾ (ಪಶ್ಚಿಮ ಬಂಗಾಳ) : ಹತ್ತನೇ ತರಗತಿ ಪರೀಕ್ಷೆ ಬರೆಯಲು ತೆರಳುತ್ತಿದ್ದ ವಿದ್ಯಾರ್ಥಿ ಆನೆ ದಾಳಿಗೆ ಬಲಿಯಾಗಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಇಲ್ಲಿನ ಮಹಾರಾಜ್‌ಘಾಟ್‌ನಲ್ಲಿನ ಪರೀಕ್ಷಾ ಕೇಂದ್ರಕ್ಕೆ ತನ್ನ ತಂದೆಯೊಂದಿಗೆ ಬೈಕ್ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿ ಮೇಲೆ ಆನೆಯೊಂದು ದಾಳಿ ನಡೆಸಿದೆ. ಮೃತ ವಿದ್ಯಾರ್ಥಿಯನ್ನು ಅರ್ಜುನ್ ದಾಸ್ ಎಂದು ಗುರುತಿಸಲಾಗಿದೆ.
ಬೈಕುಂಠಪುರ ಕಾಡಿನ ರಸ್ತೆಯಲ್ಲಿ ತೆರಳುತ್ತಿದ್ದಾಗ ಏಕಾಏಕಿ ಹಿಂಡಿನಿಂದ ಬೇರ್ಪಟ್ಟ ಆನೆಯೊಂದು ಇವರ ಮೇಲೆ ದಾಳಿ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವೇಳೆ ಆನೆ ದಾಳಿಗೊಳಗಾದ ವಿದ್ಯಾರ್ಥಿಯನ್ನು ತಕ್ಷಣ ಜಲ್ಪೈಗುರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅದಾಗಲೇ ವಿದ್ಯಾರ್ಥಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಘಟನೆ ಸಂಬಂಧ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಾಪ ಸೂಚಿಸಿದ್ದಾರೆ. ಅಷ್ಟೇ ಅಲ್ಲದೆ ಅರಣ್ಯ ಪ್ರದೇಶಗಳ ಮೂಲಕ ಪರೀಕ್ಷೆ ಬರೆಯಲು ಆಗಮಿಸುವ ವಿದ್ಯಾರ್ಥಿಗಳಿಗೆ ಬಸ್ ಸೇವೆಯನ್ನು ಒದಗಿಸಿಕೊಡುವಂತೆ ಶಿಕ್ಷಣ ಇಲಾಖೆಗೆ ಸೂಚನೆ ನೀಡಿದ್ದಾರೆ.