ಭೋಪಾಲ್(ಮಧ್ಯಪ್ರದೇಶ): ಮಹಾಮಾರಿ ಕೊರೊನಾ ವೈರಸ್ಗೆ ಜನಸಾಮಾನ್ಯರ ಜತೆ ಅನೇಕ ಸರ್ಕಾರಿ ಸಿಬ್ಬಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇತರರ ಪ್ರಾಣ ಉಳಿಸಿಲು ಹೋಗಿ ಮಹಾಮಾರಿಗೆ ಬಲಿಯಾಗಿದ್ದಾರೆ. ಹೀಗಾಗಿ ಅವರನ್ನೇ ನಂಬಿ ಜೀವನ ನಡೆಸುತ್ತಿದ್ದ ಅನೇಕ ಕುಟುಂಬಗಳು ಬೀದಿಗೆ ಬಂದಿವೆ.
ಸದ್ಯ ಅಂತಹ ಕುಟುಂಬಗಳಿಗೆ ಮಧ್ಯಪ್ರದೇಶ ಸರ್ಕಾರ ಮಹತ್ವದ ಯೋಜನೆ ಜಾರಿಗೆ ತಂದಿದೆ. ಸಹಾನುಭೂತಿ ಆಧಾರದ ಮೇಲೆ ಮುಖ್ಯಮಂತ್ರಿ ಕೋವಿಡ್-19 ನೇಮಕಾತಿಯಡಿ ಅವರ ಕುಟುಂಬದ ಓರ್ವ ಸದಸ್ಯನಿಗೆ ಸರ್ಕಾರಿ ನೌಕರಿ ನೀಡಲು ನಿರ್ಧರಿಸಿದೆ.
ಇದನ್ನೂ ಓದಿ: ಕಾಳಸಂತೆಯಲ್ಲಿ ಆಮ್ಲಜನಕ ಮಾರಾಟ: ನವನೀತ್ ಕಲ್ರಾ ವಿಚಾರಣೆಗೆ ನ್ಯಾಯಾಲಯ ಆದೇಶ
ಕೋವಿಡ್ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಪ್ರಾಣ ಕಳೆದುಕೊಂಡ ರಾಜ್ಯ ಸರ್ಕಾರಿ ನೌಕರರ ಕುಟುಂಬದ ಸದಸ್ಯನೊಬ್ಬ ಈ ಉದ್ಯೋಗ ಪಡೆದುಕೊಳ್ಳಲಿದ್ದಾರೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
ಮಧ್ಯಪ್ರದೇಶದಲ್ಲೂ ಕಳೆದ ಕೆಲ ದಿನಗಳಿಂದ ಕೋವಿಡ್ ಸೋಂಕಿತ ಪ್ರಕರಣ ಹೆಚ್ಚಾಗುತ್ತಿದ್ದು, ರಾಜ್ಯದಲ್ಲಿ ಸದ್ಯ 99,970 ಸಕ್ರಿಯ ಕೋವಿಡ್ ಪ್ರಕರಣಗಳಿವೆ. ಇದರ ಮಧ್ಯೆ ಸಾವಿರಾರು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.