ಭೋಪಾಲ್ (ಮಧ್ಯಪ್ರದೇಶ):ಆನ್‌ಲೈನ್ ಗೇಮ್‌ಗೆ ಮಾರುಹೋಗಿದ್ದ ಹಾಗೂ ವ್ಯಸನಿಯಾಗಿದ್ದ ಬಾಲಕನೊಬ್ಬ ಪೋಷಕರ ವಿರೋಧದಿಂದಾಗಿ ಮನನೊಂದು ಆತ್ಮಹತ್ಯೆಗೆ ಶರಣಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಬಾಲಕನ ಈ ಸಾವು ಈಗ ಮಧ್ಯಪ್ರದೇಶ ಸರ್ಕಾರವನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿದೆ. ರಾಜ್ಯ ಸರ್ಕಾರ ಆನ್‌ಲೈನ್ ಗೇಮ್ಗಳನ್ನು ನಿಯಂತ್ರಿಸಲು ಕಾಯ್ದೆಯನ್ನು ತರಲಿದೆ ಎಂದು ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ.
ಆನ್‌ಲೈನ್ ಮೊಬೈಲ್ ಗೇಮ್‌ನ ಚಟದಿಂದಾಗಿ ಮಕ್ಕಳು ಮತ್ತು ಯುವಕರು ಸಾವಿಗೆ ಶರಣಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾತನಾಡಿರುವ ಅಲ್ಲಿನ ಗೃಹ ಸಚಿವರು, ಆನ್‌ಲೈನ್ ಆಟಗಳು ಇತ್ತೀಚಗೆ ಗಂಭೀರ ಸಮಸ್ಯೆಗಳಾಗಿ ಪರಿಣಮಿಸಿವೆ. ಇಂತಹ ದುರಂತಗಳನ್ನು ತಡೆಯುವ ಉದ್ದೇಶದಿಂದ, ನಾವು ಮಧ್ಯಪ್ರದೇಶದಲ್ಲಿ ಆನ್‌ಲೈನ್ ಗೇಮಿಂಗ್ ನಿಯಂತ್ರಿಸುವ ಕಾಯಿದೆ ತರುತ್ತಿದ್ದೇವೆ. ಈ ಸಂಬಂಧ ಕರಡು ಸಹ ಸಿದ್ಧಪಡಿಸಲಾಗಿದೆ. ಅದಕ್ಕೆ ಶೀಘ್ರ ಅಂತಿಮ ರೂಪ ನೀಡುತ್ತೇವೆ ಎಂದು ಘೋಷಿಸಿದ್ದಾರೆ.