ಗ್ವಾಲಿಯರ್ (ಮಧ್ಯಪ್ರದೇಶ): ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ವಿಶಿಷ್ಟ ಮದುವೆ ನಡೆದಿದೆ. ತಂದೆಯೊಬ್ಬರು ಮಾರಣಾಂತಿಕ ಕಾಯಿಲೆಯಿಂದ ಹಾಸಿಗೆ ಹಿಡಿದ ತನ್ನ 26 ವರ್ಷದ ಮಗಳಿಗೆ ಶ್ರೀಕೃಷ್ಣನೊಂದಿಗೆ ಸಡಗರದಿಂದ ಮದುವೆ ಮಾಡಿಸಿದ್ದಾರೆ.
ಜಿಲ್ಲೆಯ ಮೋಹನ ಗ್ರಾಮದ ನಿವಾಸಿ ಶಿಶುಪಾಲ್ ರಾಥೋಡ್ ಪ್ರತಿಷ್ಠಿತ ಉದ್ಯಮಿ. ಇವರ ಪುತ್ರಿ ಸೋನಾಲ್ 26 ವರ್ಷಗಳಿಂದಲೂ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಸೋನಾಲ್ ಗುಣಪಡಿಸಲಾಗದ ನರರೋಗ ಕಾಯಿಲೆಯಿಂದ ಬಳಲುತ್ತಿದ್ದು, ನಡೆಯಲೂ ಕೂಡ ಸಾಧ್ಯವಾಗಲ್ಲ.
ಆದರೆ, ಎಲ್ಲ ವಯಸ್ಸಿನ ಹುಡುಗಿಯರಂತೆ ಸೋನಾಲ್ ಕೂಡ ಮದುವೆಯಾಗಲು ಬಯಸಿದ್ದರು. ಆದರೆ, ಎಷ್ಟೇ ಚಿಕಿತ್ಸೆ ಕೊಡಿಸಿದರೂ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಸಾಧ್ಯವಾಗಿಲ್ಲ. ಆದ್ದರಿಂದ ಮಗಳ ಆಸೆಯನ್ನು ಪೂರೈಸಲು ತಂದೆ ಶಿಶುಪಾಲ್ ರಾಥೋಡ್ ಶ್ರೀಕೃಷ್ಣನೊಂದಿಗೆ ಮಗಳ ವಿವಾಹಕ್ಕೆ ನಿರ್ಧರಿಸಿದ್ದರು.
ಅಂತೆಯೇ, ನವೆಂಬರ್ 7ರಂದು ಶ್ರೀಕೃಷ್ಣನೊಂದಿಗೆ ಮಗಳ ವಿವಾಹ ನಿಶ್ಚಯಿಸಿ, ಆಮಂತ್ರಣ ಪತ್ರಿಕೆಯನ್ನೂ ಮಾಡಿಸಿದ್ದರು. ಮಗಳ ಮದುವೆಗೆ ಎಲ್ಲ ಸಂಬಂಧಿಕರಿಗೆ ಆಹ್ವಾನ ಕೊಟ್ಟು, ಸಂಪ್ರದಾಯದಂತೆ ಮಂಗಳ ವಾದ್ಯಗಳೊಂದಿಗೆ ನೆರವೇರಿಸಲಾಗಿದೆ.
ಯುವತಿಗೆ ಕೃಷ್ಣನ ವೇಷ: ಈ ಮದುವೆಯನ್ನು ತುಂಬಾ ವಿಶಿಷ್ಟವಾಗಿ ಮಾಡಲಾಗಿದೆ. ಯುವತಿಗೆ ಕೃಷ್ಣನ ವೇಷ ಹಾಕಿಸಿ, ಆ ವೇಷಧಾರಿಯೊಂದಿಗೆ ಸೋನಾಲ್ಗೆ ಪರಸ್ಪರ ಹಾರ ಬದಲಾವಣೆ ಮಾಡಿಸಲಾಗಿದೆ. ನಂತರ ಮದುವೆ ಮೆರವಣಿಗೆ ಸಹ ನಡೆಸಲಾಗಿದೆ.
ಮಗಳ ಮದುವೆ ಇಚ್ಛೆಯನ್ನು ಈಡೇರಿಸಲು ಶ್ರೀಕೃಷ್ಣನೊಂದಿಗೆ ಮದುವೆ ಮಾಡಿಸಲಾಗಿದೆ. ಮದುವೆ ಆಮಂತ್ರಣ ನೀಡಿದಾಗ ನಮ್ಮ ಸಂಬಂಧಿಕರೇ ಆಶ್ಚರ್ಯ ಗೊಂಡಿದ್ದರು. ಹಾಸಿಗೆ ಹಿಡಿದ ಮಗಳನ್ನು ಮದುವೆಯಾಗಲು ಒಪ್ಪಿದವರು ಯಾರು ಎಂದು ತಿಳಿಯಲು ಎಲ್ಲರೂ ಕಾತರರಾಗಿದ್ದರು ಎಂದು ತಂದೆ ಶಿಶುಪಾಲ್ ರಾಥೋಡ್ ತಿಳಿಸಿದ್ದಾರೆ.
ಇದನ್ನೂ ಓದಿ:ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವ ಲಾಲುಗೆ ಕಿಡ್ನಿ ದಾನ ಮಾಡುತ್ತಿರುವ ಮಗಳು!