ಭೋಪಾಲ್ (ಮಧ್ಯಪ್ರದೇಶ): ಭಿಕ್ಷೆ ಬೇಡುತ್ತಿದ್ದ 11 ವರ್ಷದ ಬಾಲಕಿಯ ಮೇಲೆ ಮೈಹಾರ್ ದೇವಾಲಯದ ಆವರಣದಲ್ಲಿ ದೇವಸ್ಥಾನದ ಆಡಳಿತ ಸಮಿತಿಯ ಇಬ್ಬರು ನೌಕರರು ಸಾಮೂಹಿಕ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆಯ ಒಂದು ದಿನದ ಬಳಿಕ ಅತ್ಯಾಚಾರ ಆರೋಪಿಗಳು ಇಬ್ಬರ ಮನೆಗಳನ್ನೂ ಜಿಲ್ಲಾಡಳಿತ ಮತ್ತು ಪೊಲೀಸ್ ಆಡಳಿತ ತಂಡ ಶನಿವಾರ ಬೆಳಗ್ಗೆ ಬುಲ್ಡೋಜರ್ನಿಂದ ನೆಲಸಮ ಮಾಡಿದೆ.
ಆರೋಪಿಗಳನ್ನು ರವಿ ಚೌಧರಿ ಮತ್ತು ಅತುಲ್ ಬಧೋಲಿಯಾ ಎಂದು ಗುರುತಿಸಲಾಗಿದ್ದು, ಪೊಲೀಸರು ಕೂಡಲೇ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಳಿಕ ನ್ಯಾಯಾಲಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಸಂತ್ರಸ್ತೆಯನ್ನು ರೇವಾದ ಸಂಜಯ್ ಗಾಂಧಿ ಸ್ಮಾರಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆ.
ಈ ಭೀಕರ ಘಟನೆಯ ನಂತರ, ಜಿಲ್ಲಾಡಳಿತ ಮತ್ತು ಪೊಲೀಸ್ ಆಡಳಿತ ತ್ವರಿತ ಕ್ರಮ ಕೈಗೊಂಡು ಆರೋಪಿಗಳ ಮನೆಗಳನ್ನು ಕೆಡವಲು ನಿರ್ಧರಿಸಿದೆ. ಇಂತಹ ಅತ್ಯಾಚಾರ ಪ್ರಕರಣಗಳು ಮತ್ತೆ ಮರುಕಳಿಸಬಾರದು. ಇದನ್ನು ಸಮಾಜವಾಗಲಿ, ಆಡಳಿತವಾಗಲಿ ಸಹಿಸುವುದಿಲ್ಲ ಎನ್ನುವ ಸಂದೇಶ ಸಾರುವ ಉದ್ದೇಶದಿಂದ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ.
ಮೊದಲು ರವಿ ಚೌಧರಿ ಅವರ ಮನೆಯನ್ನು ನೆಲಸಮ ಮಾಡಲು ಗುರಿಯಾಗಿಸಿ, ಬುಲ್ಡೋಜರ್ ಅನ್ನು ನಿಯೋಜಿಸಲಾಗಿತ್ತು. ಜಿಲ್ಲಾಡಳಿತ ಸಿಬ್ಬಂದಿ ಎರಡನೇ ಆರೋಪಿ ಅತುಲ್ ಬಧೋಲಿಯಾ ಅವರ ನಿವಾಸ ಕೆಡವಲು ಅಲ್ಲಿಗೆ ತಲುಪಿದಾಗ, ಅವರು ಕುಟುಂಬ ಸದಸ್ಯರಿಂದ ಪ್ರತಿರೋಧ ಎದುರಿಸಬೇಕಾಯಿತು. ಅತುಲ್ ಅವರ ಸಂಬಂಧಿಕರು ಮನೆ ಕೆಡವುವ ನಿರ್ಧಾರವನ್ನು ವಿರೋಧಿಸಿ ಪ್ರತಿಭಟಿಸಿದರು. ಮನೆ ಕೆಡವುವಂತಹ ಯಾವುದೇ ಕ್ರಮದ ಮೊದಲು ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದರು. ಕುಟುಂಬದವರು ಏನೇ ಪ್ರತಿಭಟನೆ ನಡೆಸಿದರೂ, ಜಿಲ್ಲಾಡಳಿತ ಮಾತ್ರ ತಮ್ಮ ನಿಲುವಿನಿಂದ ಹಿಂದೆ ಸರಿಯದೇ ಅತುಲ್ ಅವರ ಮನೆ ಕೆಡವಿ ಹಾಕುವ ಕೆಲಸ ಮಾಡಿದೆ.
"ಆಡಳಿತದ ಜಂಟಿ ತಂಡ ಮತ್ತು ಪೊಲೀಸರು ಇಬ್ಬರೂ ಆರೋಪಿಗಳ ಮನೆಗಳನ್ನು ಕೆಡವಿದ್ದಾರೆ" ಎಂದು ಸತ್ನಾ ಜಿಲ್ಲಾಧಿಕಾರಿ ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್ ನಲ್ಲಿ ಟ್ವೀಟ್ ಮಾಡುವ ಮೂಲಕ ದೃಢ ಪಡಿಸಿದ್ದಾರೆ. ಸಂತ್ರಸ್ತ ಕುಟುಂಬಕ್ಕೆ ಜಿಲ್ಲಾಧಿಕಾರಿ ರೆಡ್ ಕ್ರಾಸ್ ಮೂಲಕ 50,000 ರೂ. ತಕ್ಷಣದ ನೆರವು ನೀಡಿದ್ದಾರೆ.
ಸಾಮೂಹಿಕ ಅತ್ಯಾಚಾರ ಘಟನೆ ಜಿಲ್ಲಾ ಕೇಂದ್ರದಿಂದ 45 ಕಿಮೀ ದೂರದಲ್ಲಿರುವ ದೇವಾಲಯದ ಪಟ್ಟಣವಾದ ಮೈಹಾರ್‌ನಲ್ಲಿ ಗುರವಾರ ನಡೆದಿದ್ದು, ಶುಕ್ರವಾರ ಬೆಳಕಿಗೆ ಬಂದಿತ್ತು. ಆರೋಪಿಗಳು ಬಾಲಕಿಗೆ ಆಮಿಷ ಒಡ್ಡಿ ಪ್ರತ್ಯೇಕ ಸ್ಥಳಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾರೆ. ಪ್ರತ್ಯೇಕ ಸ್ಥಳಕ್ಕೆ ಕೊಂಡೊಯ್ದ ಆರೋಪಿಗಳು, ಬಾಲಕಿಗೆ ಕ್ರೂರವಾಗಿ ಹಲವು ಕಡೆ ಕಚ್ಚಿದ್ದಾರೆ ಎಂದು ಆರೋಪಿಸಲಾಗಿತ್ತು. ತೀವ್ರ ರಕ್ತಸ್ರಾವದಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಂತ್ರಸ್ತೆಯನ್ನು ಶುಕ್ರವಾರ ಸುಧಾರಿತ ವೈದ್ಯಕೀಯ ಚಿಕಿತ್ಸೆಗಾಗಿ ರೇವಾದಲ್ಲಿರುವ ಆಸ್ಪತ್ರೆಗೆ ತಕ್ಷಣವೇ ದಾಖಲಿಸಲಾಗಿತ್ತು. ಆದರೆ, ವೈದ್ಯಕೀಯ ಪರೀಕ್ಷೆಯ ವರದಿ ಬಂದ ನಂತರ ವಾಸ್ತವಾಂಶ ಗೊತ್ತಾಗಲಿದೆ ಹಾಗೂ ಆ ಬಳಿಕವೇ ತನಿಖೆ ಮತ್ತಷ್ಟು ಚುರುಕುಗೊಳ್ಳಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಇಬ್ಬರೂ ಆರೋಪಿಗಳು ಮಾ ಶಾರದಾ ದೇವಿ ಮಂದಿರ ನಿರ್ವಹಣಾ ಸಮಿತಿಯ ನೌಕರರಾಗಿದ್ದು, ಬಂಧನದ ನಂತರ ಸಮಿತಿ ಈ ಇಬ್ಬರನ್ನೂ ತಕ್ಷಣವೇ ವಜಾಗೊಳಿಸಿದೆ.
ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರಕ್ಕೆ ಶಿಕ್ಷೆ), 376 ಡಿಬಿ (12 ವರ್ಷದೊಳಗಿನ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಶಿಕ್ಷೆ), 366 ಎ (ಅಪ್ರಾಪ್ತ ಬಾಲಕಿ ಮೇಲೆ ದೌರ್ಜನ್ಯ), 323 (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು), 324 (ಸ್ವಯಂಪ್ರೇರಿತವಾಗಿ ಅಪಾಯಕಾರಿ ಶಸ್ತ್ರಾಸ್ತ್ರಗಳು ಅಥವಾ ವಿಧಾನಗಳ ಮೂಲಕ ಗಾಯಗೊಳಿಸುವುದು), 34 (ಸಾಮಾನ್ಯ ಉದ್ದೇಶ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆಯ ಸಂಬಂಧಿತ ನಿಬಂಧನೆಗಳ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಬಾಲಕಿಯ ಮೇಲೆ ಕಾಮುಕರ ಅಟ್ಟಹಾಸ: ದೆಹಲಿಯ ನಿರ್ಭಯಾ ಪ್ರಕರಣ ನೆನಪಿಸುವಂತಿದೆ ಈ ಗ್ಯಾಂಗ್ ರೇಪ್