ನವದೆಹಲಿ: ಇಂದು ನಾಲ್ಕು ರಾಜ್ಯಗಳಾದ ಛತ್ತೀಸ್‌ಗಢ, ತೆಲಂಗಾಣ, ರಾಜಸ್ಥಾನ, ಮಧ್ಯಪ್ರದೇಶದ ಚುನಾವಣಾ ಫಲಿತಾಂಶ ಹೊರಬೀಳುತ್ತಿದೆ . ಬೆಳಗ್ಗೆ 8 ಗಂಟೆಯಿಂದಲೇ ವಿಧಾನಸಭಾ ಚುನಾವಣೆ ಮತ ಎಣಿಕೆ ಕಾರ್ಯ ಪ್ರಾರಂಭಗೊಂಡಿದೆ. ಭಾರತೀಯ ಚುನಾವಣಾ ಆಯೋಗದ ಫಲಿತಾಂಶಗಳ ಪ್ರಕಾರ ಮಧ್ಯಪ್ರದೇಶದಲ್ಲಿ ಭಾರತೀಯ ಜನತಾಪಕ್ಷ 159 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡಿದ್ದರೆ, ಕಾಂಗ್ರೆಸ್ 67 ಕ್ಷೇತ್ರಗಳು ಹಾಗೂ ಇತರರು ನಾಲ್ಕು ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡಿವೆ.
ರಾಜ್ಯ ಬಿಜೆಪಿ ಅಧ್ಯಕ್ಷ ವಿಡಿ ಶರ್ಮಾ ಮಾತನಾಡಿ, "ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆದ್ದು ಇತಿಹಾಸ ಸೃಷ್ಟಿಸುತ್ತದೆ ಎಂದು ನಾನು ನಂಬಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಅಭಿವೃದ್ಧಿ ಮುಂದುವರೆಯಲಿದೆ " ಎಂದು ತಿಳಿಸಿದ್ದಾರೆ. ಕಳೆದ 20 ವರ್ಷಗಳಿಂದ ರಾಜ್ಯ ಬಿಜೆಪಿ ಭದ್ರಕೋಟೆಯಾಗಿದೆ.
ಸದ್ಯದ ಮಾಹಿತಿ ಪ್ರಕಾರ ಕಾಂಗ್ರೆಸ್ 66 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇಂದು ಬೆಳಗ್ಗೆ ರಾಜ್ಯ ಕಾಂಗ್ರೆಸ್ ಕಚೇರಿ ಬಳಿ ಮಾತನಾಡಿದ ಮಾಜಿ ಮುಖ್ಯಮಂತ್ರಿ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್, "ನಾನು ಯಾವುದೇ ಟ್ರೆಂಡ್‌ಗಳನ್ನು ನೋಡಿಲ್ಲ, 11 ಗಂಟೆಯವರೆಗೆ ಯಾವುದೇ ಟ್ರೆಂಡ್‌ಗಳನ್ನು ನೋಡಬೇಕಾಗಿಲ್ಲ. ನನಗೆ ಸಂಪೂರ್ಣ ವಿಶ್ವಾಸವಿದೆ, ನಾನು ಮಧ್ಯಪ್ರದೇಶದ ಮತದಾರರನ್ನು ನಂಬುತ್ತೇನೆ. ಮಧ್ಯಪ್ರದೇಶದ ಮತದಾರರು ತಮ್ಮ ಭವಿಷ್ಯವನ್ನು ಸುರಕ್ಷಿತವಾಗಿರಿಸಿಕೊಳ್ಳುತ್ತಾರೆ ಎಂದು ನಂಬಿದ್ದೇನೆ. ಸ್ಥಾನಗಳ ಸಂಖ್ಯೆ ಲೆಕ್ಕಿಸಬೇಡಿ. ನಮ್ಮ ಗೆಲುವು ಖಚಿತ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ಈ ಚುನಾವಣೆ ಫಲಿತಾಂಶ ಹೊರಬೀಳುತ್ತಿರುವ ಗತಿಯನ್ನು ಗಮನಿಸಿದರೆ, 20 ವರ್ಷಗಳ ಹಿಂದೆ ದಿಗ್ವಿಜಯ್ ಸಿಂಗ್ ಅವರ ಸರ್ಕಾರವನ್ನು ಸೋಲಿಸಿ, ಉಮಾ ಭಾರತಿ ನೇತೃತ್ವದಲ್ಲಿ ಬಿಜೆಪಿ 170 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದು ಭರ್ಜರಿ ಜಯ ಗಳಿಸಿತ್ತು. ಅಂದಿನಿಂದ ಇಲ್ಲಿವರೆಗೂ ಮಧ್ಯಪ್ರದೇಶ ಬಿಜೆಪಿಯ ಭದ್ರ ನೆಲೆಯಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 109 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ 114 ಸ್ಥಾನಗಳಲ್ಲಿ ಜಯಭೇರಿ ಬಾರಿಸಿತ್ತು. ಹೀಗಾಗಿ ಕಾಂಗ್ರೆಸ್ ಬಿಎಸ್ಪಿ ಹಾಗೂ ಇನ್ನಿತರರ ಬೆಂಬಲ ಪಡೆದು ಸರ್ಕಾರವನ್ನು ರಚನೆ ಮಾಡಿತ್ತು. ಆದರೆ ಆ ಬಳಿಕ ಜ್ಯೋತಿರಾದಿತ್ಯ ಸಿಂದಿಯಾ ಅವರ ನೇತೃತ್ವದಲ್ಲಿ ಬಂಡಾಯ ಎದ್ದ ಕಾಂಗ್ರೆಸ್ ಶಾಸಕರು, ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದರು. ಹೀಗಾಗಿ ಬಿಜೆಪಿ ಸರ್ಕಾರ ರಚನೆ ಆಗಿತ್ತು.
ಕಳೆದ ಬಾರಿ ರಾಜವಂಶಸ್ಥ ಜ್ಯೋತಿರಾದಿತ್ಯ ಸಿಂದಿಯಾ ಅವರ ಬೆಂಬಲ ಕಾಂಗ್ರೆಸ್ಗೆ ಇತ್ತು. ಆದರೆ ಈ ಬಾರಿ ಅವರು ಬಿಜೆಪಿಯಲ್ಲಿದ್ದಾರೆ.
ಕೈ ಹಿಡಿದ ಮಹಿಳಾಪರ ಯೋಜನೆಗಳು: ಇನ್ನು ಮಧ್ಯಪ್ರದೇಶ ಸರ್ಕಾರ ಬೇಗನೇ ಎಚ್ಚೆತ್ತುಕೊಂಡು ಮಹಿಳೆಯರಿಗೆ ಧನಸಹಾಯ ಮಾಡುವ ಯೋಜನೆ ಜಾರಿಗೆ ತಂದಿತು. ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವು ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿತು. ಹೀಗಾಗಿ ಚುನಾವಣೆಗೆ ಮುಂಚೆಯೇ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿ ನಿಲ್ಲುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಆರಂಭಿಕವಾಗಿ ವಿಶ್ಲೇಷಣೆ ಮಾಡಲಾಗುತ್ತಿದೆ.