ಕರ್ನಾಟಕ

karnataka

ETV Bharat / bharat

ಮಧ್ಯಪ್ರದೇಶ ಸಿಎಂ ಗಾದಿಗೆ ಪೈಪೋಟಿ: ರೇಸ್‌ನಲ್ಲಿ ಘಟಾನುಘಟಿಗಳು - ನರೇಂದ್ರ ಸಿಂಗ್ ತೋಮರ್

Madhya Pradesh CM tussle: ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಂಡಿದ್ದರೂ, ಸಿಎಂ ಆಯ್ಕೆ ವಿಚಾರ ಕಗ್ಗಂಟಾಗಿದೆ. ಘಟಾನುಘಟಿ ನಾಯಕರು ರೇಸ್​​ನಲ್ಲಿರುವುದು ಇದಕ್ಕೆ ಕಾರಣ.

ಮಧ್ಯಪ್ರದೇಶ ಸಿಎಂ ರೇಸ್​ನಲ್ಲಿ ಘಟಾನುಘಟಿಗಳು
ಮಧ್ಯಪ್ರದೇಶ ಸಿಎಂ ರೇಸ್​ನಲ್ಲಿ ಘಟಾನುಘಟಿಗಳು

By ETV Bharat Karnataka Team

Published : Dec 5, 2023, 5:21 PM IST

ಭೋಪಾಲ್:ಮಧ್ಯಪ್ರದೇಶದಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿ ಅಧಿಕಾರ ಉಳಿಸಿಕೊಂಡಿರುವ ಬಿಜೆಪಿಗೆ ಈಗ ಸಿಎಂ ಆಯ್ಕೆಯ ಸವಾಲು ಎದುರಾಗಿದೆ. 18 ವರ್ಷಗಳಷ್ಟು ಸುದೀರ್ಘ ಕಾಲ ಸಿಎಂ ಆಗಿ ಪಕ್ಷವನ್ನು ಬಲಪಡಿಸಿರುವ ಶಿವರಾಜ್​ ಸಿಂಗ್​ ಚೌಹಾಣ್​ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಹಲವು ಹಿರಿಯ ನಾಯಕರು ಕೂಡ ರೇಸ್​ನಲ್ಲಿದ್ದಾರೆ. 'ಮಾಮಾ' ಎಂದೇ ಜನಜನಿತರಾಗಿರುವ ಚೌಹಾಣ್​, ಪಕ್ಷದ ಟ್ರಂಪ್​ ಕಾರ್ಡ್​. ಆದರೆ ಸಿಎಂ ಆಯ್ಕೆ ಅಷ್ಟು ಸುಲಭವಾಗಿಲ್ಲ.

ಚುನಾವಣೆಗೂ ಮುನ್ನ ಪಕ್ಷ ಯಾರನ್ನೂ ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿರಲಿಲ್ಲ. ಹಾಲಿ ಸಿಎಂ ಅವರನ್ನೂ ಪಕ್ಷ ಮುನ್ನೆಲೆಗೆ ತಂದಿರಲಿಲ್ಲ. ಸಾಮೂಹಿಕ ನಾಯಕತ್ವದಲ್ಲಿ ವಿಧಾನಸಭೆ ಚುನಾವಣೆ ಗೆಲುವು ಸಾಧಿಸಿದ್ದು, ಮುಂದಿನ ಸಿಎಂ ಯಾರು ಎಂಬುದು ಸದ್ಯಕ್ಕೆ ಕಗ್ಗಂಟಾಗಿದೆ.

ಪ್ರಬಲ ಪೈಪೋಟಿ:ಶಿವರಾಜ್​ ಸಿಂಗ್​ ಚೌಹಾಣ್ ಅವರೊಂದಿಗೆ ಕೈಲಾಶ್ ವಿಜಯವರ್ಗಿಯ, ಪ್ರಹ್ಲಾದ್ ಪಟೇಲ್, ನರೇಂದ್ರ ಸಿಂಗ್ ತೋಮರ್ ಅವರ ಹೆಸರು ಸಿಎಂ ಸ್ಥಾನಕ್ಕೆ ಚಾಲ್ತಿಯಲ್ಲಿದೆ. ಈ ನಾಲ್ವರೂ ಪಕ್ಷದ ಪ್ರಭಾವಿಗಳೇ ಆಗಿದ್ದಾರೆ. ಈಗಾಗಲೇ 4 ಬಾರಿ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿರುವ ಚೌಹಾಣ್​ ಮೊದಲ ಆಯ್ಕೆಯಾಗಿದ್ದಾರೆ. ಬುಧ್ನಿ ಕ್ಷೇತ್ರದಲ್ಲಿ 1,04,974 ಮತಗಳ ಭಾರಿ ಅಂತರದಿಂದ ಗೆದ್ದಿರುವ ಚೌಹಾಣ್ ತಮ್ಮ ಸರ್ಕಾರದಲ್ಲಿ ಜಾರಿಗೆ ತಂದ 'ಲಾಡ್ಲಿ ಬೆಹನ್ ಯೋಜನೆ' ಪಕ್ಷಕ್ಕೆ ಭರ್ಜರಿ ಯಶಸ್ಸು ತಂದುಕೊಟ್ಟಿದೆ.

ಸತತ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಕೈಲಾಶ್ ವಿಜಯವರ್ಗಿಯ ಕೂಡ ಸಿಎಂ ಹುದ್ದೆಯ ಪ್ರಬಲ ಆಕಾಂಕ್ಷಿ. ಇವರು ಬಿಜೆಪಿ ಪ್ರಧಾನ ಕಾರ್ಯದರ್ಶಿಯಂತಹ ಪ್ರಮುಖ ಹುದ್ದೆಗಳಲ್ಲಿ ಕೆಲಸ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನೂ ಬಿಜೆಪಿ ಪರಿಗಣಿಸಬಹುದು ಎಂಬುದು ರಾಜಕೀಯ ತಜ್ಞರ ವಿಶ್ಲೇಷಣೆ.

ಇನ್ನೊಂದೆಡೆ, ಇತರ ಹಿಂದುಳಿದ ವರ್ಗಗಳ (ಒಬಿಸಿ) ಸಮುದಾಯದ ಪ್ರಮುಖ ನಾಯಕ ಪ್ರಹ್ಲಾದ್ ಪಟೇಲ್ ಹೆಸರೂ ಕೂಡ ಕೇಳಿ ಬರುತ್ತಿದೆ. ಪಟೇಲ್, ಸಿಂಧಿಯಾ ಅವರಂತೆ ಪ್ರಧಾನಿ ಮತ್ತು ಗೃಹ ಸಚಿವರೊಂದಿಗಿನ ಉತ್ತಮ ಸಂಬಂಧ ಹೊಂದಿರುವ ವ್ಯಕ್ತಿ.

ನರೇಂದ್ರ ಸಿಂಗ್ ತೋಮರ್ ಅವರು ಪ್ರಧಾನಿ ಮೋದಿ ಮತ್ತು ಶಾ ಅವರ ನಂಬಿಕಸ್ಥ ನಾಯಕರಲ್ಲಿ ಒಬ್ಬರು. ಚುನಾವಣೆಗೂ ಮುನ್ನ ಚೌಹಾಣ್‌ಗೆ ಪರ್ಯಾಯವಾಗಿ ತೋಮರ್ ಅವರನ್ನು ಪರಿಗಣಿಸಲಾಗಿತ್ತು. ಆದರೆ, ಅವರ ಪುತ್ರ ದೇವೇಂದ್ರ ಪ್ರತಾಪ್ ಸಿಂಗ್ ತೋಮರ್ ವಿರುದ್ಧ ಕೇಳಿಬಂದ ಭ್ರಷ್ಟಾಚಾರ ಆರೋಪದಿಂದಾಗಿ ಸಿಎಂ ಸ್ಥಾನದ ಅವಕಾಶ ಕ್ಷೀಣಿಸಿದೆ.

ನಾನು ಸಿಎಂ ರೇಸ್​ನಲ್ಲಿಲ್ಲ:ಇದೇ ವೇಳೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಶಿವರಾಜ್ ಸಿಂಗ್ ಚೌಹಾಣ್, "ನಾನು ಸಿಎಂ ಸ್ಥಾನದ ಸ್ಪರ್ಧಿಯಲ್ಲ. ಸಾಮಾನ್ಯ ಕಾರ್ಯಕರ್ತ. ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ವಹಿಸಿಕೊಳ್ಳುವೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ:ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ: ಬಿಜೆಪಿ- ಕಾಂಗ್ರೆಸ್​ ಪಡೆದ ಮತ ಪ್ರಮಾಣ ಎಷ್ಟಿದೆ?

ABOUT THE AUTHOR

...view details