ಭೋಪಾಲ್ (ಮಧ್ಯಪ್ರದೇಶ ): ಇಲ್ಲಿನ ಪ್ರಮುಖ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಓಂಕಾರೇಶ್ವರ ದೇವಾಲಯದ ಬಳಿ ನಿರ್ಮಿಸಲಾಗಿರುವ ತತ್ವಜ್ಞಾನಿ, ಆಚಾರ್ಯತ್ರಯರಲ್ಲಿ ಮೊದಲಿಗರಾದ ಶ್ರೀ ಆದಿ ಶಂಕರಾಚಾರ್ಯರ ಬೃಹತ್ ಪ್ರತಿಮೆಯನ್ನು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಅನಾವರಣಗೊಳಿಸಲಿದ್ದಾರೆ.
ಖಂಡ್ವಾ ಜಿಲ್ಲೆಯ ಓಂಕಾರೇಶ್ವರದ ನರ್ಮದಾ ನದಿ ತೀರದ ಮಾಂಧಾತಾ ಬೆಟ್ಟದಲ್ಲಿ ನಿರ್ಮಿಸಲಾಗಿರುವ 108 ಅಡಿ ಎತ್ತರದ ಆದಿ ಶಂಕರರ ಮೂರ್ತಿಯನ್ನು ಸೆಪ್ಟೆಂಬರ್ 21ರಂದು ಲೋಕಾರ್ಪಣೆಗೊಳಿಸಲಾಗುತ್ತಿದೆ. ಎಂಟನೇ ಶತಮಾನ ಅದ್ವೈತ ಸಿದ್ಧಾಂತದ ಪ್ರತಿಪಾದಕರಾದ ಶಂಕರಚಾರ್ಯರ ಪ್ರತಿಮೆಯನ್ನು ಇಲ್ಲಿನ ಓಂಕಾರೇಶ್ವರನಿಗೆ ಅರ್ಪಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಂಕರಾಚಾರ್ಯರು ಸನಾತನ ಧರ್ಮದ ಉಳಿವಿಗಾಗಿ ಕಾಲ್ನಡಿಗೆಯಲ್ಲೇ ದೇಶಾದ್ಯಂತ ಸಂಚರಿಸಿ ತಮ್ಮ ಸಿದ್ಧಾಂತವನ್ನು ಪ್ರತಿಪಾದಿಸಿದರು. ಇವರಿಗೆ ಗೌರವವನ್ನು ಸಲ್ಲಿಸುವ ಉದ್ದೇಶದಿಂದ ಮಧ್ಯಪ್ರದೇಶ ಸರ್ಕಾರವು 108 ಅಡಿ ಎತ್ತರದ ಶಂಕರಾಚಾರ್ಯರ ಮೂರ್ತಿಯನ್ನು ಸ್ಥಾಪಿಸಿದೆ. ಈ ಪ್ರತಿಮೆಯನ್ನು ಏಕಾತ್ಮಕಾ ಕಿ ಪ್ರತಿಮಾ(ಏಕತ್ವದ ಪ್ರತಿಮೆ) ಎಂದು ಕರೆಯಲಾಗಿದ್ದು, ಮಾಂಧಾತಾ ಬೆಟ್ಟ ತುದಿಯಲ್ಲಿ ನಿರ್ಮಾಣ ಮಾಡಲಾಗಿದೆ.
ಈ ಪ್ರತಿಮೆಯನ್ನು ಸಿಎಂ ಶಿವರಾಜ್ ಚೌಹಾನ್ ಸೆಪ್ಟೆಂಬರ್ 18ರಂದು ಲೋಕಾರ್ಪಣೆಗೊಳಿಸಬೇಕಿತ್ತು. ಆದರೆ ಈ ಪ್ರದೇಶದಲ್ಲಿ ಭಾರಿ ಮಳೆ ಸುರಿದಿದ್ದರಿಂದ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಇದೀಗ ಸೆಪ್ಟೆಂಬರ್ 21ರಂದು ಶಂಕರಾಚಾರ್ಯರ ಪ್ರತಿಮೆಯನ್ನು ಲೋಕಾರ್ಪಣೆ ಮಾಡುತ್ತಿದ್ದಾರೆ.