ಭೋಪಾಲ್: ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೆ ನಡೆದ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಸಂಜೆ 5 ಗಂಟೆ ವೇಳೆಗೆ ಶೇ.71.11ರಷ್ಟು ಜನ ಮತ ಚಲಾಯಿಸಿದರೆ, ರಾಜಧಾನಿ ಭೋಪಾಲ್ನಲ್ಲಿ 45.34ರಷ್ಟು ವೋಟಿಂಗ್ ನಡೆದರೆ, ಅಗರ್ ಮಾಲ್ವಾದಲ್ಲಿ ಶೇ.82 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ಮಧ್ಯಪ್ರದೇಶದಲ್ಲಿ ಇಂದು ಒಂದೇ ಹಂತದಲ್ಲಿ ಎಲ್ಲ 230 ಕ್ಷೇತ್ರಗಳಿಗೆ ಮತದಾನ ನಡೆಯಿತು. ಬೆಳಗ್ಗೆ 7ಗಂಟೆಯಿಂದ ಆರಂಭವಾದ ಮತದಾನ ಸಂಜೆ 6 ಗಂಟೆಗೆ ಮುಕ್ತಾಯಗೊಂಡಿದೆ. ನಕ್ಸಲ್ ಪೀಡಿತ ಕೆಲ ಪ್ರದೇಶಗಳಲ್ಲಿ ಬೆಳಗ್ಗೆ 7ರಿಂದ ಮಧ್ಯಾಹ್ನ 3ರವರೆಗೆ ಮತದಾನ ನಡೆಯಿತು.
ಮತ್ತೊಂದೆಡೆ ಛತ್ತೀಸ್‌ಗಢದಲ್ಲಿ 70 ಸ್ಥಾನಗಳಿಗೆ ನಡೆದ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಮತದಾನ ಮುಕ್ತಾಯಗೊಂಡಿದೆ. ಮಧ್ಯಾಹ್ನ 3 ಗಂಟೆ ವೆರೆಗೂ ಶೇ.55.31 ರಷ್ಟು ಮತ ಚಲಾವಣೆಯಾಗಿದೆ. ಗರಿಯಾಬಂದ್ ಜಿಲ್ಲೆಯಲ್ಲಿ ಒಟ್ಟು ಶೇ.57.65ರಷ್ಟು ಮತದಾನವಾದರೆ, ರಾಜೀಂ ಕ್ಷೇತ್ರದಲ್ಲಿ ಮಧ್ಯಾಹ್ನ 3 ಗಂಟೆಯವರೆಗೆ ಶೇ. 56.16 , ಬಿಂದ್ರನವಗಢದಲ್ಲಿ ಶೇ. 59.16 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ಮಧ್ಯಾಹ್ನ 1ರವರೆಗೆ ಛತ್ತೀಸ್‌ಗಢದಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಶೇ.37.87 ಮತದಾನವಾಗಿದೆ.
ಛತ್ತೀಸ್‌ಗಢದಲ್ಲಿ ಎರಡನೇ ಹಂತದ ಚುನಾವಣೆಯಲ್ಲಿ ಒಟ್ಟು ಮತದಾರರ ಸಂಖ್ಯೆ 1,63,14,479 ಇದ್ದು, ಇದರಲ್ಲಿ ಪುರುಷ ಮತದಾರರ ಸಂಖ್ಯೆ 81,41,624 ಮತ್ತು ಮಹಿಳಾ ಮತದಾರರು ಸಂಖ್ಯೆ 81,72,171 ಇದೆ. 684 ತೃತೀಯ ಲಿಂಗಿ ಮತದಾರರಿದ್ದಾರೆ. ಮೊದಲ ಬಾರಿಗೆ ಮತ ಚಲಾಯಿಸುವವರ ಸಂಖ್ಯೆ 5,64,968 ಆಗಿದೆ. ವಿಕಲಚೇತನ ಮತದಾರರ ಸಂಖ್ಯೆ 1,30,909 ಆಗಿದೆ. 80 ವರ್ಷ ವಯಸ್ಸಿನ ಮತದಾರರ ಸಂಖ್ಯೆ 158,254 ಮತ್ತು 100 ವರ್ಷಕ್ಕಿಂತ ಮೇಲ್ಪಟ್ಟವರ ಸಂಖ್ಯೆ 2161 ಆಗಿದೆ. ಒಟ್ಟು 18,833 ಮತಗಟ್ಟೆಗಳಲ್ಲಿ ಎರಡನೇ ಹಂತದ ಮತದಾನ ನಡೆಯಿತು.