ಭೋಪಾಲ್ (ಮಧ್ಯಪ್ರದೇಶ):ಕೊರೊನಾ ಪ್ರಕರಣ ಹೆಚ್ಚಳ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಸುಮಾರು 4,500 ಕೈದಿಗಳನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಲು ಮಧ್ಯಪ್ರದೇಶ ಸರ್ಕಾರ ಆದೇಶಿಸಿದೆ.
"ಕೊರೊನಾ ಸಾಂಕ್ರಾಮಿಕ ರೋಗವನ್ನು ಪರಿಗಣಿಸಿ ಮಧ್ಯಪ್ರದೇಶ ಸರ್ಕಾರ 4,500 ಕೈದಿಗಳನ್ನು ಪೆರೋಲ್ ಮೇಲೆ ಕಳುಹಿಸಲು ನಿರ್ಧರಿಸಿದೆ" ಎಂದು ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ.
"ಜೈಲುಗಳು ತುಂಬಿವೆ ಮತ್ತು ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಜೈಲಿನಲ್ಲಿರುವ ಕೈದಿಗಳಿಗೆ ಪೆರೋಲ್ ನೀಡಲು ಸರ್ಕಾರ ನಿರ್ಧರಿಸಿದೆ. ಅತ್ಯಾಚಾರ, ಕೊಲೆ ಮತ್ತು ಇತರ ಘೋರ ಪ್ರಕರಣಗಳಿಗೆ ಜೈಲುವಾಸ ಅನುಭವಿಸಿದವರಿಗೆ ಪೆರೋಲ್ ನೀಡಲಾಗಿಲ್ಲ" ಎಂದು ಮಿಶ್ರಾ ಹೇಳಿದರು.
ಕಾರಾಗೃಹಗಳಲ್ಲಿ ಕೊರೊನಾ ಹರಡುವುದನ್ನು ತಪ್ಪಿಸಲು, ಕುಟುಂಬದ ಭೇಟಿಗೂ ತಡೆ ನೀಡಲಾಗಿದೆ. ಡಿಐಜಿ ಸಂಜಯ್ ಪಾಂಡೆ ಅವರು ರಾಜ್ಯದ ಎಲ್ಲಾ ಜೈಲುಗಳಲ್ಲಿ ಪ್ರತ್ಯೇಕ ವಾರ್ಡ್‌ಗಳನ್ನು ನಿರ್ಮಿಸಲು ಆದೇಶಿಸಿದ್ದಾರೆ. ಇದರಿಂದ ಯಾವುದೇ ರೋಗದ ಲಕ್ಷಣಗಳು ಕಂಡುಬಂದರೆ ಕೈದಿಗಳನ್ನು ಈ ಪ್ರತ್ಯೇಕ ವಾರ್ಡ್‌ಗಳಲ್ಲಿ ಇರಿಸಬಹುದು.
ರಾಜ್ಯದಲ್ಲಿ 131 ಕಾರಾಗೃಹಗಳಿದೆ. ಅವುಗಳಲ್ಲಿ 11 ಕೇಂದ್ರ ಕಾರಾಗೃಹಗಳು, 41 ಜಿಲ್ಲಾ ಮತ್ತು 6 ತೆರೆದ ಜೈಲುಗಳು ಸೇರಿದಂತೆ 73 ಉಪಜೈಲುಗಳಿವೆ. ಮೊದಲ ಹಂತದಲ್ಲಿ 4500 ಕೈದಿಗಳನ್ನು ಎರಡು ತಿಂಗಳ ಕಾಲ ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿದೆ. ಎರಡನೇ ಹಂತದಲ್ಲಿ ಹೆಚ್ಚಿನ ಕೈದಿಗಳನ್ನು ಪೆರೋಲ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ, ಕಳೆದ ವರ್ಷ 4,000 ಕೈದಿಗಳಿಗೆ ನೀಡಿದ್ದ ಪೆರೋಲ್ ಅನ್ನು ಇನ್ನೂ 60 ದಿನಗಳವರೆಗೆ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ.