ಇಂದೋರ್ (ಮಧ್ಯಪ್ರದೇಶ):ಇತ್ತೀಚಿಗೆ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರಿಗೂ ಹಠಾತ್ ಹೃದಯಾಘಾತಗಳು ಸಂಭವಿಸುತ್ತಿವೆ. ದಿಢೀರ್ ಎದೆನೋವಿನ ಕಾರಣದಿಂದ ಅನೇಕರು ಮೃತಪಟ್ಟು ಪ್ರಕರಣಗಳು ನಿರಂತರವಾಗಿ ವರದಿಯಾಗುತ್ತಿವೆ. ಇದರ ನಡುವೆ ಮಧ್ಯಪ್ರದೇಶದ ಇಂದೋರ್ನಲ್ಲಿ ವಿದ್ಯಾರ್ಥಿಯೊಬ್ಬ ನಿಂತಲ್ಲೇ ಕುಸಿದು ಬಿದ್ದು ಸಾವಿಗೀಡಾದ ಘಟನೆ ಬೆಳಕಿಗೆ ಬಂದಿದೆ. ಈತನ ಸಾವಿಗೆ ಹೃದಯಾಘಾತದ ಶಂಕೆ ವ್ಯಕ್ತವಾಗಿದೆ.
ಇಲ್ಲಿನ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ 18 ವರ್ಷದ ವಿದ್ಯಾರ್ಥಿಯೊಬ್ಬರು ಇದ್ದಕ್ಕಿದ್ದಂತೆ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಮೃತನನ್ನು ರಾಜಾ ಮಾಧವ್ ಲೋಧಿ ಎಂದು ಗುರುತಿಸಲಾಗಿದೆ. ಈತ ಸರ್ವಾನಂದನಗರ ಪ್ರದೇಶದ ನಿವಾಸಿಯಾಗಿದ್ದು, ಸಾರ್ವಜನಿಕ ಸೇವಾ ಆಯೋಗದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ. ಇದಕ್ಕಾಗಿ ಭನ್ವಾರ್ ಕುವಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೋಚಿಂಗ್ ಪಡೆಯುತ್ತಿದ್ದ. ಆದರೆ, ಇದರ ನಡುವೆ ಕೋಚಿಂಗ್ ತರಗತಿಯಲ್ಲೇ ರಾಜಾ ಮಾಧವ್ ಕುಸಿದು ಬಿದ್ದಿದ್ದಾನೆ.
ಸಿಸಿಟಿವಿಯಲ್ಲಿ ದೃಶ್ಯ ದಾಖಲು: ಖಾಸಗಿ ಕೋಚಿಂಗ್ ಸೆಂಟರ್ಗೆ ಸೇರಿದ್ದ ರಾಜಾ ಮಾಧವ್ ತರಗತಿಗೆ ಎಂದಿನಂತೆ ಹಾಜರಾಗಿದ್ದ. ಅನೇಕ ಸಹಪಾಠಿಗಳ ಮಧ್ಯೆ ಎದ್ದು ನಿಂತು ಪಾಠ ಆಲಿಸುತ್ತಿದ್ದ. ಆದರೆ, ಈ ವೇಳೆ ನಿತ್ರಾಣಗೊಂಡಾಗಿ ಮೇಜಿನ ಮೇಲೆಯೇ ಹಾಗೆ ಕುಸಿದು ಬಿದ್ದಿದ್ದಾನೆ. ಆಗ ಪಕ್ಕದಲ್ಲಿದ್ದ ಕುಳಿತಿದ್ದ ಸಹಪಾಠಿಯೊಬ್ಬ ಎಬ್ಬಿಸಲು ಮುಂದಾಗುತ್ತಾನೆ. ಆಗ ಯಾವುದೇ ಚಲನೆ ಕಂಡ ಬರುವುದಿಲ್ಲ. ಇದರಿಂದ ಗಾಬರಿಗೊಂಡ ಇತರರು ಸಹ ರಾಜಾ ಮಾಧವ್ನನ್ನು ಸುತ್ತುವರೆಯುತ್ತಾರೆ. ಈ ಎಲ್ಲ ದೃಶ್ಯಗಳು ತರಗತಿಯ ಸಿಸಿಟಿವಿಯಲ್ಲಿ ದಾಖಲಾಗಿವೆ.