ಮಧುಬನಿ (ಬಿಹಾರ) :ಮಾಧೇಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿಜಯ್ ಪ್ರಕಾಶ್ ಮೀನಾ ಅವರ ಕಾರು ಮಧುಬನಿಯ ರಾಷ್ಟ್ರೀಯ ಹೆದ್ದಾರಿ-57 ರಲ್ಲಿ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದೆ. ಪರಿಣಾಮ ವಾಹನ ನಜ್ಜುಗುಜ್ಜಾಗಿ ಮೂವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಉತ್ತರ ಬಿಹಾರದ ಮಧುಬನಿ ಜಿಲ್ಲೆಯ ಫುಲ್ಪಾರಸ್ ಪೊಲೀಸ್ ಠಾಣೆ ವ್ಯಾಪ್ತಿಯ ಪುರ್ವಾರಿ ಟೋಲ್ ಬಳಿಯ ರಾಷ್ಟ್ರೀಯ ಹೆದ್ದಾರಿ 57 ರಲ್ಲಿ ಮಂಗಳವಾರ ಬೆಳಗ್ಗೆ ‘ಡಿಎಂ, ಮಾಧೇಪುರ’ ಎಂಬ ಪ್ಲೇಟ್ ಅನ್ನು ಹೊಂದಿದ್ದ ಕಾರು ವೇಗವಾಗಿ ಬಂದಿದ್ದು, ಮಹಿಳೆ ಮತ್ತು ಮಗು ಸೇರಿದಂತೆ ಕನಿಷ್ಠ ಮೂವರಿಗೆ ಗುದ್ದಿದೆ. ಪರಿಣಾಮ ಅವರು ಸಾವನ್ನಪ್ಪಿದ್ದಾರೆ. ಕಾರು ಪಾಟ್ನಾದಿಂದ ಮಾಧೇಪುರಕ್ಕೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ.
ಬಿಳಿ ಬಣ್ಣದ SUV ಕಾರು BR-43E0005 'DM-ಮಾಧೇಪುರ' ಎಂದು ಸ್ಪಷ್ಟವಾಗಿ ಬರೆಯಲಾದ ನಂಬರ್ ಪ್ಲೇಟ್ ಅನ್ನು ಹೊಂದಿತ್ತು. ವೇಗವಾಗಿ ಬಂದ ಕಾರು ಮೊದಲು ಮಹಿಳೆಗೆ ಮತ್ತು ನಂತರ ಅವರ ಮಗುವಿಗೆ ಡಿಕ್ಕಿ ಹೊಡೆದಿದೆ. ನಂತರ ರಸ್ತೆಯ ಒಂದು ಬದಿಯಲ್ಲಿ ನಿರ್ವಹಣಾ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರ ಮೇಲೆ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮಹಿಳೆ ಮತ್ತು ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಾಯಗೊಂಡ ಇಬ್ಬರನ್ನು ದರ್ಬಾಂಗ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ಮಹಿಳೆಯನ್ನು ಗುಡಿಯಾ ದೇವಿ (28) ಮತ್ತು ಆಕೆಯ ಏಳು ವರ್ಷದ ಮಗಳು ಆರತಿ ಕುಮಾರಿ ಎಂದು ಗುರುತಿಸಲಾಗಿದೆ. ಗಾಯಗೊಂಡ ಕಾರ್ಮಿಕರನ್ನು ಅಶೋಕ್ ಸಿಂಗ್ ಮತ್ತು ರಾಜು ಸಿಂಗ್ ಎಂದು ಗುರುತಿಸಲಾಗಿದೆ. ಘಟನೆಯ ನಂತರ ಮಾಧೇಪುರದ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ವಿಜಯ ಪ್ರಕಾಶ್ ಮೀನಾ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ.
ಡಿಎಂ ಕಾರಿನೊಳಗೆ ಇದ್ದರೋ ಅಥವಾ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಅಪಘಾತದ ನಂತರ ಸ್ಥಳದಲ್ಲಿದ್ದ ಗ್ರಾಮಸ್ಥರು ಸುದ್ದಿಗಾರರೊಂದಿಗೆ ಮಾತನಾಡುತ್ತ, ಡಿಎಂ ಜೊತೆಗೆ ಅಂಗರಕ್ಷಕ ಮತ್ತು ಚಾಲಕ ಕಾರಿನಲ್ಲಿದ್ದರು. ಆದರೆ ಮೋಟಾರ್ ಸೈಕಲ್‌ನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಘಟನೆಯ ಬಳಿಕ ಮಧುಬನಿ ಜಿಲ್ಲಾಡಳಿತ ಕಾರನ್ನು ಸ್ಥಳದಿಂದ ತೆರವುಗೊಳಿಸಿದೆ.
ಈ ಘಟನೆಗೆ ಸಂಬಂಧಿಸಿದಂತೆ ಮಧುಬನಿ ಪೊಲೀಸ್ ಅಧೀಕ್ಷಕ ಸುಶೀಲ್ ಕುಮಾರ್ ಅವರು ಮಾತನಾಡಿ,“ಅಪಘಾತ ನಡೆದ ನಂತರ ಸ್ಥಳೀಯರು ಬೆಳಗ್ಗೆ NH-57 ಅನ್ನು ಸ್ವಲ್ಪ ಸಮಯದವರೆಗೆ ತಡೆದರು. ಆದರೆ ನಂತರ ರಸ್ತೆಯನ್ನು ತೆರವುಗೊಳಿಸಲಾಯಿತು. ಅಪಘಾತಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗುವುದು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು'' ಎಂದಿದ್ದಾರೆ.
ಇದನ್ನೂ ಓದಿ :ಬೆಂಗಳೂರು ನೈಸ್ ರಸ್ತೆಯಲ್ಲಿ ಭೀಕರ ಸರಣಿ ಅಫಘಾತ: ಮೂವರು ಇಂಜಿನಿಯರ್ಸ್, ಶಿಕ್ಷಕಿ ದುರ್ಮರಣ