ಕರೀಂನಗರ (ತೆಲಂಗಾಣ) : ಇತ್ತೀಚಿನ ದಿನಗಳಲ್ಲಿ ಯುವಜನರು ತಮ್ಮ ಮನಸ್ಸಿಗೆ ಇಷ್ಟವಾಗುವ ಕೆಲಸದತ್ತ ಮುಖ ಮಾಡುತ್ತಿದ್ದಾರೆ. ಯಾರದೋ ಕೈ ಕೆಳಗಡೆ ಕೆಲಸ ಮಾಡುವುದಕ್ಕಿಂತ ಸ್ವಂತ ಏನಾದರೂ ಮಾಡಬೇಕೆಂದು ಯೋಚಿಸುತ್ತಾರೆ. ಇದರಲ್ಲಿ ಕೆಲವೇ ಕೆಲವರು ಯಶಸ್ಸು ಸಾಧಿಸುತ್ತಾರೆ. ಕೆಲವರು ಎಂಬಿಎ ಮಾಡಿ ಟಿ ಅಂಗಡಿ ತೆರೆದರೆ, ಇನ್ನೂ ಕೆಲವರು ಇಂಜಿನಿಯರಿಂಗ್ ಮತ್ತಿತರ ಪದವಿ ಮಾಡಿ ತಾವು ಕಲಿತ ಉದ್ಯೋಗವನ್ನು ಬಿಟ್ಟು ತಮ್ಮ ನೆಚ್ಚಿನ ವೃತ್ತಿಯಲ್ಲಿ ಖುಷಿ ಕಾಣುತ್ತಾರೆ. ಅಂತೆಯೇ ತೆಲಂಗಾಣದ ಮಹಿಳೆಯೊಬ್ಬರು ಎಂ. ಫಾರ್ಮಸಿ (ಮಾಸ್ಟರ್ಸ್ ಇನ್ ಫಾರ್ಮಸಿ) ಓದಿ ಇದೀಗ ಹರ್ಬಲ್ ಪಾನಿಪುರಿಯನ್ನು ಮಾರಾಟ ಮಾಡುತ್ತಿದ್ದಾರೆ.
ಎಂ ಫಾರ್ಮಸಿ ಪಾನಿಪುರಿವಾಲಿ :ತೆಲಂಗಾಣದ ಜಗತ್ಯಾಲ ಜಿಲ್ಲೆಯ ಪಡಕಲ್ ನಿವಾಸಿಯಾಗಿರುವ ಕೊಪ್ಪುಲ ಪೂರ್ಣಿಮಾ ಅವರು ಎಂ.ಫಾರ್ಮಸಿ ಪದವಿ ಪಡೆದಿದ್ದಾರೆ. ವೈದ್ಯಕೀಯ ಪದವಿ ಪಡೆದ ಪೂರ್ಣಿಮಾ ಕರೀಂ ನಗರ ಖಾಸಗಿ ಶಾಲೆಯೊಂದರಲ್ಲಿ ಜೀವಶಾಸ್ತ್ರ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದರು. ಬಳಿಕ ಕೆಲವು ವರ್ಷಗಳ ಕಾಲ ಮೆಡಿಕಲ್ ಶಾಪ್ ನಡೆಸಿದರು. ಉತ್ತಮ ಸಂಬಳ, ಆದಾಯ ಇದ್ದರೂ ಪೂರ್ಣಿಮಾ ಅವರಿಗೆ ಸ್ವಂತ ಉದ್ಯಮ ಮಾಡಬೇಕೆಂಬ ಹಂಬಲ ಮನದಲ್ಲಿ ಕಾಡುತ್ತಿತ್ತು. ಪಾನಿಪುರಿ ಅಂಗಡಿ ಪ್ರಾರಂಭಿಸುವ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದ ಪೂರ್ಣಿಮಾ ತನ್ನ ಗಂಡನ ಬಳಿ ಪಾನಿಪುರಿ ಅಂಗಡಿ ಆರಂಭಿಸುವ ಬಗ್ಗೆ ತಿಳಿಸಿದ್ದಾರೆ. ಇದಕ್ಕೆ ಪೂರ್ಣಿಮಾ ಅವರ ಗಂಡ ಸಂಪೂರ್ಣ ಬೆಂಬಲ ನೀಡಿದ್ದು, ಎಂ ಫಾರ್ಮಸಿ ಪಾನಿಪುರಿವಾಲಿ ಎಂಬ ಪಾನಿಪುರಿ ಅಂಗಡಿಯನ್ನು ಪ್ರಾರಂಭಿಸಿದ್ದಾರೆ.
ಎಂ ಫಾರ್ಮಸಿ ಪಾನಿಪುರಿವಾಲಿ : ಹರ್ಬಲ್ ಪಾನಿಪುರಿ ನೀಡುವ ತೆಲಂಗಾಣದ ಮಹಿಳೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಪೂರ್ಣಿಮಾ, ನಾವು ಯಾವುದೇ ಪದವಿ ಪಡೆದರೂ, ಯಾವುದೇ ಉದ್ಯೋಗ ದೊರೆತರೂ ಅದನ್ನು ನಾವು ಕೇವಲ ದುಡ್ಡ ಗಳಿಸಲಷ್ಟೇ ಮಾಡುತ್ತೇವೆ. ಆತ್ಮತೃಪ್ತಿ ಇಲ್ಲದ ಕೆಲಸ ಮಾಡಿ ಯಾವುದೇ ಪ್ರಯೋಜನ ಇಲ್ಲ ಎಂದು ಮನಗೊಂಡು ನಾನು ಸ್ವಂತ ಏನಾದರೂ ಪ್ರಾರಂಭಿಸಬೇಕು ಎಂದು ಅಂದುಕೊಂಡೆ. ಈ ವೇಳೆ ನನಗೆ ಪಾನಿಪುರಿ ಮಾರಾಟ ಮಾಡುವ ಐಡಿಯಾ ಹೊಳೆಯಿತು. ಇದನ್ನು ಮಾಡುವುದರಿಂದ ನಾನು ನನ್ನ ಸ್ವಂತ ಉದ್ಯೋಗವನ್ನು ಮಾಡಿದಂತಾಗುತ್ತದೆ. ಹೀಗಾಗಿ ನನ್ನ ಹಿಂದಿನ ಉದ್ಯೋಗವನ್ನು ತೊರೆದು, ಎಂ ಫಾರ್ಮಸಿ ಪಾನಿಪುರಿವಾಲಿ ಎಂಬ ಅಂಗಡಿಯನ್ನು ಪ್ರಾರಂಭಿಸಿದೆ ಎಂದು ಹೇಳಿದರು.
ನಮ್ಮ ಗ್ರಾಹಕರಿಗೆ ಏನಾದರೂ ವಿಶೇಷವಾದುದನ್ನು ನೀಡಬೇಕೆಂದು ನಾನು ಹರ್ಬಲ್ ಪಾನಿಪುರಿಯನ್ನು ಮಾರಾಟ ಆರಂಭಿಸಿದೆ. ಪಾನಿಪುರಿ ಅಂಗಡಿ ಪ್ರಾರಂಭಿಸಿದ ಕೆಲವೇ ದಿನಗಳಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ವಿವಿಧೆಡೆಯಿಂದ ಜನರು ಹರ್ಬಲ್ ಪಾನಿಪುರಿ ತಿನ್ನಲು ಆಗಮಿಸುತ್ತಿದ್ದಾರೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಪಾನಿಪುರಿಯನ್ನು ಇಷ್ಟಪಡುತ್ತಿದ್ದಾರೆ. ಜನರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಪುದೀನಾ, ಜೀರಿಗೆ, ಲಸೂನ್ , ಕಟ್ಟಾಮೀಠ ಮುಂತಾದ ಪಾನಿಪುರಿಗಳನ್ನು ನೀಡುತ್ತೇವೆ. ಇದೀಗ ಉತ್ತಮ ಸ್ಪಂದನೆ ದೊರೆತಿರುವ ಹಿನ್ನೆಲೆ ಇನ್ನೂ ಹಲವು ಪಾನಿಪುರಿ ಅಂಗಡಿಗಳನ್ನು ತೆರೆಯಲು ನಿರ್ಧರಿಸಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ :ಈ ನಗರದಲ್ಲಿ ಎಲ್ಲೆಂದರಲ್ಲಿ ಉಗುಳಿದ್ರೆ ಜೋಕೆ; ಉಗಿದ್ರೆ ಬೀಳುತ್ತೆ ದಂಡ!