ತಿರುವನಂತಪುರಂ (ಕೇರಳ): ಕೇರಳದ ಯುಡಿಎಫ್ ಮಹಿಳಾ ಶಾಸಕಿ ವಿರುದ್ಧದ ತಮ್ಮ ವಿವಾದಾತ್ಮಕ ಹೇಳಿಕೆಯನ್ನು ಸಿಪಿಐ(ಎಂ) ಶಾಸಕ ಎಂಎಂ ಮಣಿ ಹಿಂಪಡೆದಿದ್ದಾರೆ. ಯಾರನ್ನೂ ಅವಮಾನಿಸುವ ಉದ್ದೇಶವನ್ನು ಹೊಂದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.
ಹತ್ತು ವರ್ಷಗಳ ಹಿಂದೆ ಹತ್ಯೆಯಾದ ಟಿಪಿ ಚಂದ್ರಶೇಖರನ್ ಅವರ ಪತ್ನಿ ಹಾಗೂ ಹಾಲಿ ಶಾಸಕಿ ರಮಾ ವಿರುದ್ಧ ಆಡಳಿತಾರೂಢ ಪಕ್ಷದ ಎಂಎಂ ಮಣಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. 'ರಮಾ ವಿಧವೆಯಾಗಿರುವುದು ಆಕೆಯ ವಿಧಿ ಲಿಖಿತ' ಎಂದು ಹೇಳಿದ್ದರು. ಇದು ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ವಾಗ್ವಾದಕ್ಕೆ ಕಾರಣವಾಗಿತ್ತು.
ಅಲ್ಲದೇ, ಮಣಿಯವರ ಈ ಹೇಳಿಕೆಗೆ ವಿಧಾನಸಭೆಯಲ್ಲೂ ಕೋಲಾಹಲ ಸೃಷ್ಟಿಸಿತ್ತು. ಶಾಸಕಿ ರಮಾ ಕ್ಷಮೆಯಾಚಿಸಬೇಕೆಂದು ಸದನದ ಬಾವಿಗಿಳಿದು ಪ್ರತಿಪಕ್ಷಗಳು ಒತ್ತಾಯಿಸಿದ್ದರು. ಇಂದು ಕೂಡ ಮಣಿಯವರ ಹೇಳಿಕೆ ಭಾರಿ ಗದ್ದಲವನ್ನೇ ಸೃಷ್ಟಿಸಿತ್ತು. ಈ ವೇಳೆ, ಮಧ್ಯಪ್ರವೇಶಿಸಿದ ಸ್ಪೀಕರ್ ಎಂ.ಬಿ.ರಾಜೇಶ್, ತಮ್ಮ ಆಕ್ಷೇಪಾರ್ಹ ಹೇಳಿಕೆಯನ್ನುಎಂ.ಎಂ.ಮಣಿ ಹಿಂಪಡೆಯುತ್ತಾರೆ ಎಂದು ನಾನು ನಿರೀಕ್ಷಿಸುತ್ತೇನೆ ಎಂದು ಹೇಳಿದರು.